ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವೈಯಾಲಿಕಾವಲ್‍ನಲ್ಲಿ ನಡೆದ ಮಹಾಲಕ್ಷ್ಮಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಕ್ತಿ ರಂಜನ್ ರಾಯ್‍ನ ತಾಯಿ ಕುಂಜಲತಾ ರಾಯ್ ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಮಗ ಕೊಲೆಯಾದ ಮಹಿಳೆಯ ಟ್ರ್ಯಾಪ್ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಕೇಳುತ್ತಲೇ ಇದ್ದಳು. ಈ ವಿಚಾರವನ್ನು ಆತ ಹೇಳಿಕೊಂಡಿದ್ದ. ನಾನು ಅವನನ್ನು ಬೆಂಗಳೂರು ತೊರೆಯುವಂತೆ ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಒಡಿಶಾದ ಭದ್ರಕ್‍ನ ಎಸ್‍ಪಿ ವರುಣ್ ಗುಂಟುಪಲ್ಲಿ, ಇತ್ತೀಚೆಗೆ ನಡೆದ ಮಹಿಳೆಯ ಕೊಲೆ ಪ್ರಕರಣದ ತನಿಖೆಗೆ ಬೆಂಗಳೂರು ಪೊಲೀಸರ ತಂಡ ಇಲ್ಲಿಗೆ ಬಂದಿತ್ತು. ಪ್ರಮುಖ ಆರೋಪಿ ಭದ್ರಕ್‍ಗೆ ಸೇರಿದವನು ಎಂದು ತಂಡ ಹೇಳಿದೆ. ತಂಡವು ಆರೋಪಿಗಳನ್ನು ಬಂಧಿಸುವ ಮೊದಲು ಮುಕ್ತಿರಾಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಯ್ ಮತ್ತು ಮಹಾಲಕ್ಷ್ಮಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿದ್ದರು. ಬಳಿಕ ಇಬ್ಬರು ಸಂಪರ್ಕದಲ್ಲಿದ್ದರು. ಮಹಾಲಕ್ಷ್ಮಿ ತನ್ನನ್ನು ಮದುವೆಯಾಗುವಂತೆ ರಾಯ್‍ಗೆ ಒತ್ತಡ ಹೇರುತ್ತಿದ್ದಳು. ಇದು ಆಗಾಗ ಜಗಳ ನಡೆಯಲು ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮಹಾಲಕ್ಷ್ಮಿ ಕೊಲೆಗೆ ಕಾರಣವನ್ನು ಡೆಟ್‍ನೋಟ್‍ನಲ್ಲಿ ಬರೆದಿಟ್ಟಿದ್ದ. ಡೈರಿಯಲ್ಲಿ ಡೆತ್‍ನೋಟ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಡೆತ್‍ನೋಟ್‍ನಲ್ಲಿ ಏನಿದೆ?
ಸೆಪ್ಟಂಬರ್ 3 ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಮುಕ್ತಿ ರಂಜನ್ ರಾಯ್ ಉಲ್ಲೇಖಿಸಿದ್ದಾನೆ. ಸೆ.3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದೇನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು. ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಬರೆದಿದ್ದಾನೆ.