ಹೊಸದಿಗಂತ ವರದಿ,ಮಡಿಕೇರಿ:
ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ. ಆದರೆ ರಾಜ್ಯದಲ್ಲಿ ಅಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸಲ್ಮಾನರ ಓಟ್ ಬ್ಯಾಂಕ್‌ಗಾಗಿ ಹಿಂದು ವಿರೋಧಿ ಧೋರಣೆ ಅನುಸರಿಸುವುದರೊಂದಿಗೆ ಮುಸಲ್ಮಾನರ ಓಲೈಕೆಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು, ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.೪ ರಷ್ಟನ್ನು ಮುಸ್ಲಿಮರಿಗೆ ಮೀಸಲಿರಿಸಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ ೩೦ ಲಕ್ಷವನ್ನು ಸರ್ಕಾರ ಘೋಷಿಸಿದೆ. ಹಿಂದು ಸಮಾಜದಲ್ಲಿ ಬಡ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ ಅವಕಾಶವಿಲ್ಲವೇ? ಅವರೇನು ಅನ್ಯಾಯ ಮಾಡಿದ್ದಾರೆಂದು ಪ್ರಶ್ನಿಸಿದರು.
ಮುಸ್ಲಿಂ ಹೆಣ್ಣು ಮಕ್ಕಳ ವಿವಾಹಕ್ಕೆ ೫೦ ಸಾವಿರ ರೂ. ನೆರವನ್ನು ಸರ್ಕಾರ ಘೋಷಿಸಿದೆ. ಹಿಂದು ಸಮಾಜದಲ್ಲಿ ಬಡ ಹೆಣ್ಣು ಮಕ್ಕಳಿಲ್ಲವೆ ಎಂದು ಕೇಳಿದ ವಿಜಯೇಂದ್ರ ಅವರು, ಮುಸ್ಲಿಂ ಓಲೈಕೆ ರಾಜಕಾರಣ ಅಕ್ಷಮ್ಯ ಅಪರಾಧವೆಂದು ತೀಕ್ಷ್ಣವಾಗಿ ನುಡಿದರು,
ಸರಕಾರದ ಇಂತಹ ಅನೇಕ ತೀರ್ಮಾನಗಳ ಹಿಂದೆ ಹಿಂದುಗಳನ್ನು ಶೋಷಿಸುವ ಹುನ್ನಾರವಿದೆ. ಓಟ್ ಬ್ಯಾಂಕ್‌ಗಾಗಿ ಮುಸಲ್ಮಾನರನ್ನು ಓಲೈಸಿ ಹಿಂದುಗಳ ವಿರುದ್ಧ ಎತ್ತಿಕಟ್ಟುವ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ನೀತಿಗೆ ನಮ್ಮ ವಿರೋಧವೇ ಹೊರತು ಬಿಜೆಪಿ ಮುಸಲ್ಮಾನ ಸಮುದಾಯದ ವಿರೋಧಿಯಲ್ಲ ಎಂದು ಹೇಳಿದರು.
ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ ದೊರಕಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಕಾಂಗ್ರೆಸ್‌ನ ಪಾಕಿಸ್ತಾನ ಪ್ರೇಮ ಬಿಜೆಪಿಯ ಈ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದ ವಿಜಯೇಂದ್ರ, ಬಿಜೆಪಿ ದೇಶದ್ರೋಹಿಗಳನ್ನು ವಿರೋಧಿಸುವ ಪಕ್ಷವಾಗಿದೆಯೇ ಹೊರತು ಮುಸಲ್ಮಾನರನ್ನು ವಿರೋಧಿಸುತ್ತಿಲ್ಲ ಎಂದು ನುಡಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂನಂತಾಗಿದೆ. ಪರಿಶಿಷ್ಟ ಜಾತಿ- ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಸರ್ಕಾರ ವಿನಿಯೋಗ ಮಾಡದೇ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದರು.
ವಿನಯ್ ಸೋಮಯ್ಯ ಸಾವಿಗೆ ಸ್ಥಳೀಯ ಶಾಸಕರೇ ಕಾರಣ ಎಂದು ದೋಷಾರೋಪಿಸಿದ ಅವರು, ಶೌಚಾಲಯ ಸರಿಪಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದೇ ತಪ್ಪಾ? ಎಂದು ಪ್ರಶ್ನಿಸಿದರಲ್ಲದೆ, ಪೊಲೀಸರ ಮೂಲಕ ಸ್ಥಳೀಯ ಶಾಸಕರು ವಿನಯ್ ಸೋಮಯ್ಯಗೆ ನಿರಂತರ ಕಿರುಕುಳ ನೀಡುವುದರೊಂದಿಗೆ ಬಿಜೆಪಿಯ ಅಮಾಯಕ ಕಾರ್ಯಕರ್ತನ ಸಾವಿಗೆ ಕಾರಣವಾಗಿದ್ದಾರೆ ಎಂದೂ ದೂರಿದರು.