ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ರಣತಂತ್ರ ಬಿರುಸಿನಿಂದ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಜೆಡಿಎಸ್ (JDS) ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯೆ ಮಾತುಕತೆ ನಡೆಯಿತು.
ದೆಹಲಿಯ ಕೃಷ್ಣ ಮೆನನ್ ಮಾರ್ಗ್ನಲ್ಲಿರುವ ಅಮಿತ್ ಶಾ (Amit Shah) ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಕೂಡ ಮಾತನಾಡಿದರು.
ಈ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್, ಕುಪೇಂದ್ರ ರೆಡ್ಡಿ, ನಿಖಿಲ್ ಕುಮಾರಸ್ವಾಮಿ ಸಹ ಹಾಜರಿದ್ದರು.
ಮಾತುಕತೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಕೆಲವು ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ ಎಂದಷ್ಟೇ ಹೇಳಿದರು.
ಮೈತ್ರಿ ವಿಚಾರವಷ್ಟೇ ಅಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದ ರೈತರಿಗೆ ಮಾರಕವಾಗುವ ರೀತಿ ಸರ್ಕಾರದ ನಡವಳಿಕೆ ಇದೆ. ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ಮಾಡುವ ಕನಿಷ್ಠ ತಿಳವಳಿಕೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಮೋದ್ ಸಾವಂತ್ ಹೇಳಿದ್ದೇನು?
ಎನ್ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಡಡೆಯಾಗಿದ್ದಕ್ಕೆ ಸ್ವಾಗತಿಸುತ್ತೇನೆ ಎಂದು ದೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನನ್ನ ಒಳ್ಳೆಯ ಸ್ನೇಹಿತರು. ಲೋಕಸಭೆಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಸೀಟ್ ಬಿಜೆಪಿ ಸಿಗಲಿದೆ ಎಂದು ಅವರು ಹೇಳಿದರು.