ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿನ ವಿಚಾರವಾಗಿ ಮಂಡ್ಯ ನಗರವನ್ನು ಬಂದ್ ಮಾಡಲು ರೈತರು ಕರೆ ನೀಡಿದ್ದಾರೆ. ಆದರೆ, ನಮ್ಮ ಸರ್ಕಾರ ನಿಮ್ಮ ಪರವಾಗಿದೆ. ಅಹಿತಕರ ಘಟನೆ ನಡೆದು ರಾಜ್ಯಕ್ಕೆ ಧಕ್ಕೆಯಾದಂತೆ ಎಲ್ಲರೂ ಜಾಗ್ರತೆವಹಿಸುವುದು ಅಗತ್ಯವಾಗಿದೆ. ನಿಮಗೆ ಕೋಪ ಇದ್ರೆ ಎಷ್ಟಾದ್ರೂ ಬೈಯಿರಿ. ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ತಮಿಳುನಾಡು 24 ಸಾವಿರ ಕ್ಯೂಸೆಕ್ ಕೇಳಿದೆ. ನಮ್ಮ ಅಧಿಕಾರಿಗಳು ಎರಡು ಕಮಿಟಿಗಳ ಮುಂದೆ ಪ್ರಸ್ತಾಪ ಮಾಡಿ ಎರಡು ಸಲ 10,000 ಕ್ಯೂಸೆಕ್ಸ್ ಬಿಡಲು ಒಪ್ಪಿದ್ದೆವು. ನಂತರ ಒತ್ತಡ ಮಾಡಿ 5,000 ಕ್ಯೂಸೆಕ್‌ಗೆ ಇಳಿಸಿದೆವು. ಮಳೆ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆ ಇತ್ತು. ಈಗ ಅಪೀಲು ಹೋಗಬೇಕು ಅಂತ ತೀರ್ಮಾನ ಮಾಡಿದ್ದೆವು. ಆದರೆ, ಇಬ್ಬರ ಅಪೀಲುಗಳನ್ನು ಡಿಸ್‌ಮಿಸ್ ಮಾಡಿದ್ದಾರೆ. ಸೆ.27ರವರೆಗೆ ನೀರು ಬಿಡಲು ಆದೇಶ ಆಗಿದೆ. ಈ ಪರಿಸ್ಥಿತಿ ಎಲ್ಲಾ ಸರ್ಕಾರಗಳ ಕಾಲದಲ್ಲಿ ಕೂಡಾ ಆಗಿತ್ತು ಎಂದು ಸಮಜಾಯಿಷಿ ನೀಡಿದರು.
ನಾಳೆ ಮಂಡ್ಯ ಬಂದ್ ನಿಂದ ಕಾವೇರಿ ವಿಚಾರವಾಗಿ ಏನೂ ಆಗಲ್ಲ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ನಾವೇ ನಿಮ್ಮ ಪರ ಹೋರಾಟ ಮಾಡ್ತೀವಿ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ. ಸರ್ಕಾರ ನಿಮ್ಮ ಪರವಾಗಿದೆ. ಅಹಿತಕರ ಘಟನೆ ನಡೆದ್ರೆ ರಾಜ್ಯಕ್ಕೆ ಧಕ್ಕೆ ಆಗುತ್ತದೆ. ನಿಮಗೆ ಕೋಪ ಇದ್ದರೆ ಎಷ್ಟಾದ್ರೂ ಬೈಯಿರಿ, ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ. ಇವತ್ತು ಬೊಮ್ಮಾಯಿ ಯಡಿಯೂರಪ್ಪ ಎಲ್ಲಾ ಮಾತಾಡ್ತಾ ಇದಾರೆ. ಅವರು ವಿಪಕ್ಷದವರು ಮಾತಾಡ್ಲೇ ಬೇಕು. ಅವರು ಯಾವ ಲಾಯರ್ ಇಟ್ಟಿದ್ರೋ, ನಾವೂ ಅದೇ ಲಾಯರ್ ಇಟ್ಟಿರೋದು ಎಂದು ಹೇಳಿದರು.
ಕೇಂದ್ರದ ಮಂತ್ರಿಗಳು ನಮ್ಮ ಕೈಲಾದ ಸಹಕಾರ ಕೊಡ್ತೀವಿ ಹೇಳಿದ್ದಾರೆ. ಕೋರ್ಟ್ ಮುಂದೆ ನಾವು ವಾಸ್ತವಾಂಶ ತಿಳಿಸಬೇಕು. ಇಡೀ ಸರ್ಕಾರ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕು ಇಡೀ ದೇಶದಲ್ಲಿ ಇಂತ ಪರಿಸ್ಥಿತಿ ಇದೆ. ಮಳೆ ಬರದೇ ಇರೋದ್ರಿಂದ ಹೀಗಾಗಿದೆ. ಒಟ್ಟಾರೆ ನಾನು ರಾಜಕಾರಣ ಮಾತಾಡಲ್ಲ. ಎಲ್ಲರಿಗೂ ಉತ್ತರ ಕೊಡುವ ಶಕ್ತಿ ನನಗಿದೆ. ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರಿಗೂ ಉತ್ತರ ಕೊಡಬಲ್ಲೆನು. ನಿಮ್ಮ ನಿಮ್ಮ ಸರ್ಕಾರಗಳು ಏನು ಮಾಡಿವೆ ಅಂತ ಹೇಳಬಲ್ಲೆ. ಸಿನಿಮಾದವರು, ಸ್ವಾಮಿಗಳು, ಸಂಘಟನೆ ಗಳು ಈಗ ಭಾರಿ ರೋಷಾವೇಶದಿಂದ ಮಾತಾಡ್ತಾ ಇದಾರೆ. ನೀರಿಗಾಗಿ ನಡಿಗೆ ನಾನು ನನಗೋಸ್ಕರ ಮಾಡಿದ್ದೆನಾ.? ಎಂದು ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದರು.