ಹೊಸದಿಗಂತ ವರದಿ ಸಿರುಗುಪ್ಪ:
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ನಡುಕ ಶರುವಾಗಿದೆ. ಮುಂಬರುವ ಲೋಕಸಭೆ ಹಾಗೂ ಜಿ.ಪಂ. ಹಾಗೂ ತಾ.ಪಂ.ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಲಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶಾಸಕರ ನಿವಾಸದ ಆವರಣದಲ್ಲಿ ಕೊಪ್ಪಳ ಲೋಕಸಭೆ ಚುನಾವಣೆ ಹಿನ್ನೆಲೆ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಪೂರ್ವ ಸಿದ್ಧತಾ ಸಭೆ ಹಾಗೂ ಬಿಎಲ್ 2 ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಡಿಎಸ್ ಮುಳುಗುವ ಹಡಗು ಎಂದು ಕಾಂಗ್ರೆಸ್ ನವರು ಗೇಲಿ ಮಾಡ್ತಾರೆ, ಎಚ್.ಡಿ.ದೇವೇಗೌಡರ ಶಕ್ತಿ ಏನೆಂಬುದು ಅವರಿಗೆ ಗೊತ್ತಿಲ್ಲ, ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ಶಾಕ್ ನೀಡಿದೆ. ಕ್ಷೇತ್ರದಲ್ಲಿ 5 ಜಿ.ಪಂ. ಕ್ಷೇತ್ರಗಳಿದ್ದವು, ಸದ್ಯ 7 ಕ್ಷೇತ್ರಗಳಾಗಿವೆ, ತಾ.ಪಂ.20 ಕ್ಷೇತ್ರಗಳಿದ್ದು ಬದಲಾವಣೆಯಾಗಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಅಂತರಗಳಿಂದ ಗೆಲುವು ಸಾಧಿಸಲಿದ್ದೇವೆ, ಇದರಲ್ಲಿ ಯಾವುದೇ ಅನುಮಾನ ಬೇಡ. ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲೂ ಬಿಜೆಪಿ ಕಮಲ ಅರಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಲು ಗೆಲುವಿಗೆ ಒಂದು ಮತವೂ ಮುಖ್ಯವಾಗಿದೆ, ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಬೇಕು. ಬೂತ್ ಮಟ್ಟದ ಪದಾಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ನೀಡಲಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಕಳೆದ ಚುನಾವಣೆಯಲ್ಲಿ ಸೊಲು ಅನುಭವಿಸಿರುವೆ ಎಂದು ನಾನು ಎದೆಗುಂದಿಲ್ಲ, ನಿಮ್ಮೊಂದಿಗೆ ನಾನಿರುವೆ, ಧೈರ್ಯದಿಂದ ಎಲ್ಲರೂ ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು.
ಸುಳ್ಳು ಗ್ಯಾರಂಟಿಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿಗಾಗಿ ನಯಾ ಪೈಸೆ ಹಣವಿಲ್ಲ, ನಾನಾ ಅಭಿವೃದ್ಧಿ ಕೆಲಸಗಳಿಗೆ ಗುತ್ತಿಗೆದಾರರಿಗೆ 1ಕೋಟಿ ಅಲ್ಲ 1ಲಕ್ಷ ರೂ. ಬಿಡುಗಡೆ ಮಾಡಿಲ್ಲ, ಸರ್ಕಾರಿ ನೌಕರರಿಗೆ ಎರಡು ತಿಂಗಳಾದರೂ ಇಲ್ಲಿವರೆಗೆ ವೇತನ ನೀಡಿಲ್ಲ, ಸರ್ಕಾರದ ಖಜಾನೆ ಖಾಲಿ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಖಜಾನೆ ಖಾಲಿ ಇಲ್ಲ ಎಂದು ಸಿ.ಎಂ
ಸಿದ್ದರಾಮಯ್ಯ ಅವರು ಹೇಳ್ತಾರೆ. ಇದೇ ರೀತಿ 2-3 ತಿಂಗಳು ನಡೆದರೆ ಹರಾಜು ಹಾಕುವ ಸ್ಥಿತಿ ಬರಲಿದೆ, ನುಡಿದಂತೆ ನಡೆದಿದ್ದೇವೆ ಅಂತಾರೆ, ಎಲ್ಲವೂ ಸುಳ್ಳು ಎಂದರು.
ಸುಳ್ಳು ಗ್ಯಾರಂಟಿಗಳಿಗೆ ಅನುದಾನ ಹೊಂದಿಸಲು ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಹಣವನ್ನು ಬಳಸಲು ಮುಂದಾಗಿದ್ದಾರೆ. ವಿದ್ಯುತ್ ಫ್ರೀ ಎಂದು ಪುಕ್ಕಟೆ ಪ್ರಚಾರ ಪಡೆದ ಸರ್ಕಾರ, ತಿಂಗಳ ಬಿಲ್ ಅನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಮೇಲೆ ಹೊರೆ ಹಾಕಲು ಮುಂದಾಗಿದೆ. ಬಡ ಜನರ ಕಷ್ಟಗಳನ್ನು ಆಲಿಸದ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ. ಮುಂಬರುವ ಲೋಕಸಭೆ, ಜಿ.ಪಂ.ಹಾಗೂ ತಾ.ಪಂ.ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.