ಪಾದಯಾತ್ರೆಯ ಮೂಲಕ ರಾಜ್ಯವನ್ನು ಸೋಂಕಿನ ಗಂಭೀರ ಸ್ಥಿತಿಗೆ ದೂಡುತ್ತಿರುವ ಕಾಂಗ್ರೆಸ್ ನಾಯಕರು: ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು

ಹೊಸದಿಗಂತ ವರದಿ,ಮೈಸೂರು:

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕು ಹರಡುವಿಕೆ ತೀವ್ರವಾಗಿ ಹೆಚ್ಚಾಗುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು, ರಾಜ್ಯವನ್ನು ಗಂಭೀರ ಸ್ಥಿತಿಗೆ ದೂಡತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೊರೋನಾ ವೈರಸ್ ಉಲ್ಬಣವಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲೆಂದು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಸೋಂಕು ಹರಡುವಿಕೆಯ ಪರಿಸ್ಥಿತಿ ಗೊತ್ತಿದ್ದರೂ ಸಹ ಕಾಂಗ್ರೆಸ್ ನಾಯಕರು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಸಾವಿರಾರು ಜನರನ್ನು ಕಟ್ಟಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಇದರಿಂದಾಗಿ ಜನರ ಆರೋಗ್ಯ ಪ್ರಾಣಕ್ಕೆ ಸಂಚಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದೆಡೆ ಕೊರೋನಾ ಸೋಂಕು, ಮತ್ತೊಂದೆಡೆ ರೂಪಾಂತರಿಯಾದ ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದ್ದು, ಸಾವಿರಾರು ಜನರಿಗೆ ನಿತ್ಯವೂ ಸೋಂಕು ತಗಲುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕಾದ ಕಾಂಗ್ರೆಸ್ ನಾಯಕರು, ಕೆಲಸವಿಲ್ಲದ ಪುಡಾರಿ ಗಳಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು ಕಿಡಿಕಾರಿದರು.
2013ರ ಮೇ ತಿಂಗಳಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ನಾಲ್ಕೂವರೆ ವರ್ಷಗಳ ಕಾಲ ನಿದ್ದೆ ಮಾಡುತ್ತಾ ಕಾಲಹರಣ ಮಾಡಿ, ಮಾರ್ಚ್ 19 2018 ರಂದು ಮೇಕೆದಾಟು ಯೋಜನೆಗಾಗಿ ಡಿಪಿಆರ್ ಸಲ್ಲಿಸಲು ಕಾರಣೀಭೂತ ರಾಗುತ್ತಾರೆ. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಸ್ವತಹ ಸಿದ್ದರಾಮಯ್ಯನವರೇ ಸೋಲನುಭವಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನ ಮಾಜಿ ಸಿಎಂ ಎಚ್.ಡಿಕುಮಾರಸ್ವಾಮಿಯಾಗಲಿ, ಬಿಎಸ್. ಯಡಿಯೂರಪ್ಪನವರ ಆಗಲಿ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು, ನಂತರ ತಾವೇ ಬೆಂಬಲಿಸಿ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದು, ಹೆಚ್.ಡಿ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದರು. ಆಗ ಜೋಡೆತ್ತು ಗಳಂತೆ ಮೆರೆದಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರಾಗಲಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರು, ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಏಕೇ ಮುಂದಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರನ್ನು ಕುತಂತ್ರದಿAದ ಇಳಿಸಿದ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದ ಹೆಚ್.ಡಿ.ಕುಮಾರಸ್ವಾಮಿ ಜೊತೆ ಸೇರಿ, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಬಹುದಾಗಿತ್ತಲ್ಲ . ಯಾಕೇ ಆ ಕೆಲಸ ಮಾಡಲಿಲ್ಲ. ಕಾಂಗ್ರೆಸ್, ಜೆಡಿಎಸ್‌ನವರಿಗೆ ಮುಂದಿನ ಚುನಾವಣೆ ಎದುರಿಸಲು ಯಾವುದೇ ಕಾರ್ಯಸೂಚಿಗಳಿಲ್ಲ. ಆದ್ದರಿಂದ ಎರಡೂ ಪಕ್ಷಗಳು ನೀರಿನ ವಿಷಯವನ್ನು ಭಾವನಾತ್ಮಕವಾಗಿ ಜನರ ಮುಂದೆ ತೆಗೆದುಕೊಂಡು ಹೋಗಿ, ಚುನಾವಣೆಗೆ ತೆರಳಲು ಹೊರಟಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಪಾದಯಾತ್ರೆಯ ಮೊದಲನೇ ದಿನವೇ ನಡಿಗೆಯನ್ನು ಮೊಟಕುಗೊಳಿಸಿ ಸಿದ್ದರಾಮಯ್ಯನವರು ವಾಪಸ್ ಹೋಗಿದ್ದು ಜ್ವರದ ಕಾರಣದಿಂದ ಅಲ್ಲ.
ಮೊದಲನೇ ದಿನ ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪಟಾಲಂ ಹೆಚ್ಚಿದ್ದರಿಂದ ಸಿದ್ದರಾಮಯ್ಯನವರನ್ನು ಮುಂದೆ ಸಾಗಲು ಬಿಡದೆ, ಹಿಂದೆ ತಳ್ಳಿದರು. ಇದರಿಂದ ಮುನಿಸಿಕಕೊಂಡ ಸಿದ್ದರಾಮಯ್ಯ ಪಾದಯಾತ್ರೆ ಮೊಟಕುಗೊಳಿಸಿ, ಅಲ್ಲಿಂದ ಹೋಗಿದ್ದರೆ, ವಿನಹ ಬೇರೆ ಕಾರಣದಿಂದಲ್ಲ ಎಂದು ಹೇಳಿದರು.
ವರುಣಾ ವಿಧಾನಸಭಾ ಕ್ಷೇತ್ರದಿಂದ ಬಸ್ಸುಗಳಲ್ಲಿ ಬಡವರು, ಅಮಾಯಕರನ್ನು ತಲಾ ಎರಡು ಸಾವಿರ ಕೊಟ್ಟು, ಪಾದಯಾತ್ರೆಯಲ್ಲಿ ಭಾಗವಹಿಸಲೆಂದು ಕರೆದುಕೊಂಡು ಹೋಗಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡವರು ವರುಣ ಕ್ಷೇತ್ರಕ್ಕೆ ಕೊರೋನಾ ಹಬ್ಬಿಸಲು ಹೊರಟಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು, ಕೊರೋನಾ ಸೋಂಕು ತಗುಲದಂತೆ ಮುನ್ನೇಚ್ಚರಿಕೆಯ ಕ್ರಮಗಳನ್ನು ವಹಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತೋಟದಪ್ಪ ಬಸವರಾಜು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!