ಕೋವಿಡ್ ಮೂರನೇ ಅಲೆ ಎದುರಿಸಲು ಸರ್ಕಾರ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆ

ಹೊಸದಿಗಂತ ವರದಿ,ವಿಜಯಪುರ:

ಕೋವಿಡ್ ಮೂರನೇ ಅಲೆ ಎದುರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ಮಾಡಿರುವೆ. ಜಿಲ್ಲೆಯಲ್ಲಿ ಜನವರಿ 1 ರಿಂದ ಇಲ್ಲಿಯವರೆಗೆ 160 ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ, ಇದರಲ್ಲಿ 148 ರೋಗಿಗಳು ಹೋಮ್ ಐಸೊಲೇಶನ್ ನಲ್ಲಿ ಇದ್ರೆ 12 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ಕೋವಿಡ್ ಅಲೆ ಮೊದಲಿನ ಎರಡು ಕೋವಿಡ್ ಅಲೆಯಷ್ಟು ಭಯಾನಕವಾಗಿಲ್ಲ, ಮೂರನೇ ಅಲೆಯನ್ನು ಎದುರಿಸಲು ನಾವು ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.

ಇಂದು ಜಿಲ್ಲೆಯಲ್ಲಿ 1 ರಿಂದ 18 ವರ್ಷದ ಮಕ್ಕಳ ಸ್ಥಿತಿಗತಿ ನೋಡಿದರೆ 50 ಮಕ್ಕಳಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲೂ ಮಕ್ಕಳಿಗೆ ಪಾಸಿಟಿವ್ ಬಂದಿತ್ತು. ಮಕ್ಕಳಿಗೆ ಇರುವ ಲಕ್ಷಣ ನೋಡಿದರೆ ಸೀತ ಹಾಗೂ ಗಂಟಲು ನೋವು ಮಾತ್ರ ಕಾಣಿಸಿಕೊಂಡಿದ್ದು, ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ ಮೂರರಿಂದ 15 ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕಲಾಗುತ್ತಿದೆ, ಮಕ್ಕಳಿಗೆ ಕೋವಿಡ್ ಹೆಚ್ಚಾಗುವ ಆತಂಕ ಹಿನ್ನಲೆ 10 ವೆಂಟಿಲೇಟರ್ ಹೊಂದಿದ ಚಿಕ್ಕ ಮಕ್ಕಳ ಚಿಕಿತ್ಸಾ ಘಟಕ ಈಗಾಗಲೇ ಆರಂಭವಾಗುತ್ತಿದೆ, ಜೊತೆಗೆ ತಾಲೂಕಾಸ್ಪತ್ರೆ ಸೇರಿದಂತೆ ಮಕ್ಕಳಿಗಾಗಿ ವಿಶೇಷ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ವಿಶೇಷ ತಜ್ಞರು ಸಹಿತ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಇದ್ದಾರೆ ಎಂದರು.

ಇನ್ನೂ 14 ಬೆಡ್ ಸಾಮಾನ್ಯ ತೀವ್ರ ನೀಗಾ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 642 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಸಹಿತ ಇವೆ. ಕೋವಿಡ್ ಮೂರನೇ ಅಲೆಯ ಆತಂಕ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಜೊತೆಗೆ ಖಾಸಗಿ ಆಸ್ಪತ್ರೆಗಳು ಸಹಿತ‌ ಸಿದ್ಧತೆ ಮಾಡಿಕೊಳ್ಳಬೇಕಿದೆ. ಕಳೆದ ಎರಡು ಅಲೆಗಳಲ್ಲಿ ಶೇ. 50 ರಷ್ಟು ಪ್ರತಿಶತ ಬೆಡ್ ಖಾಸಗಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದಿಂದ ಇಡಲಾಗಿತ್ತು ಈ ಬಾರಿ ಶೇ. 75 ಬೆಡ್ ಗಳ ಇಡುವಂತೆ ಸೂಚಿಸಲಾಗಿದೆ. ಇನ್ನೂ ಆಕ್ಸಿಜನ್ ಘಟಕಗಳ ಸಿದ್ಧತೆ ಕೂಡಾ ಜಿಲ್ಲಾಸ್ಪತ್ರೆ ಯಲ್ಲಿ ಮಾಡಿಕೊಳ್ಳಲಾಗಿದೆ, ಜನರು ಮೂರನೇ ಕೋವಿಡ್ ಅಲೆಯಿಂದ ಆತಂಕಗೊಳ್ಳುವದು ಬೇಡ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಗೋವಿಂದ ರೆಡ್ಡಿ, ಶಾಸಕ ರಮೇಶ ಭೂಸನೂರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!