ಹೊಸದಿಗಂತ ಡಿಜಿಟಲ್ ಡೆಸ್ಕ್:
ಉರ್ದು ದಿನಾಚರಣೆಯ ಅಂಗವಾಗಿ ನವೆಂಬರ್ 9 ರಂದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಭವ್ಯವಾದ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಸರ್ಕಾರದ ಈ ನಿರ್ಧಾರವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ಕರ್ನಾಟಕದ ಎಲ್ಲಾ ಸಮುದಾಯಗಳ ಜನರಿಗೆ ಪರಿಚಯಿಸುವುದು ಈ ಹಬ್ಬದ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ.
ಉರ್ದು ಹಬ್ಬದ ಪ್ರಮುಖ ಆಕರ್ಷಣೆಗಳು
ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಈ ಹಬ್ಬವು ಕೇವಲ ಸಾಹಿತ್ಯ ಗೋಷ್ಠಿಗಷ್ಟೇ ಸೀಮಿತವಾಗಿರದೆ, ಉರ್ದು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಿದೆ, ಉರ್ದು ಸಾಹಿತ್ಯದ ಅಪರೂಪದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಸಾಂಪ್ರದಾಯಿಕ ಉರ್ದು ಶೈಲಿಯ ಖಾದ್ಯಗಳ ಮಳಿಗೆಗಳು, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ದೇಶದ ಪ್ರಖ್ಯಾತ ಕವಿಗಳು ಭಾಗವಹಿಸುವ ‘ಬೃಹತ್ ಮುಶಾಯಿರಾ’ (ಕವಿಗೋಷ್ಠಿ) ಕಾರ್ಯಕ್ರಮಗಳು ಜರುಗಲಿವೆ.
ʼವಿಧಾನಸೌಧದ ಆವರಣದಲ್ಲಿ ಬೇರೆ ಇಲಾಖೆಗಳ ಕಾರ್ಯಕ್ರಮಗಳು ನಡೆಯುವಾಗ, ಉರ್ದು ಸಾಹಿತ್ಯದ ಬೃಹತ್ ಕಾರ್ಯಕ್ರಮವನ್ನೇಕೆ ಮಾಡಬಾರದು ಎಂಬ ಆಲೋಚನೆಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಉರ್ದು ಕೇವಲ ಒಂದು ಭಾಷೆಯಲ್ಲ, ಅದು ದೊಡ್ಡ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆʼ ಎಂದು ಸಚಿವ ಖಾದರ್ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಇದು ಓಟ್ ಬ್ಯಾಂಕ್ ರಾಜಕಾರಣ: ಕೆರಳಿದ ಬಿಜೆಪಿ
ಸರ್ಕಾರದ ಈ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ವಿಧಾನಸೌಧದ ಆವರಣದಲ್ಲಿ ಉರ್ದು ಹಬ್ಬ ನಡೆಸಲು ಅವಕಾಶ ನೀಡಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಿಗರ ಅಸ್ಮಿತೆಯ ಮತ್ತು ಸ್ವಾಭಿಮಾನದ ಸಂಕೇತವಾಗಿರುವ ವಿಧಾನಸೌಧವನ್ನು ಕಾಂಗ್ರೆಸ್ ಸರ್ಕಾರವು ಒಂದು ನಿರ್ದಿಷ್ಟ ಸಮುದಾಯದ ‘ಓಟ್ ಬ್ಯಾಂಕ್ ಓಲೈಕೆ’ಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸುರೇಶ್ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡಿಗರ ಹೆಮ್ಮೆಯ ಸಾಕ್ಷಿಯಾಗಿರುವ ವಿಧಾನಸೌಧದ ಇಂತಹ ಭವ್ಯವಾದ ವೇದಿಕೆಯನ್ನು ಕನ್ನಡ ಭಾಷೆಯ ಕಾರ್ಯಕ್ರಮಗಳಿಗಾಗಿ ಸರ್ಕಾರ ಇದುವರೆಗೆ ಎಷ್ಟು ಬಾರಿ ಮುಕ್ತವಾಗಿ ನೀಡಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಆಚರಣೆಯ ಸಮಯವಾಗಿರುವುದರಿಂದ, ಅದೇ ತಿಂಗಳಿನಲ್ಲಿ ವಿಧಾನಸೌಧದಲ್ಲಿ ಉರ್ದು ಕಾರ್ಯಕ್ರಮ ಆಯೋಜಿಸುತ್ತಿರುವುದು ಮುಂಬರುವ ದಿನಗಳಲ್ಲಿ ರಾಜಕೀಯ ವಿವಾದಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ.



