ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾಗೆ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಶುಕ್ರವಾರಕೆಂಪು ಬಣ್ಣದಲ್ಲಿ ‘1984’ ಎಂದು ಬರೆದ ಬ್ಯಾಗ್ ವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.
ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಇತ್ತೀಚಿಗೆ ಲೋಕಸಭಾ ಕಲಾಪದ ವೇಳೆ ಪ್ಯಾಲೇಸ್ತಿನ್ ಮತ್ತು ಬಾಂಗ್ಲಾದೇಶ ಉಲ್ಲೇಖಿಸುವ ಬ್ಯಾಗ್ ಹಿಡಿದು ಬಂದಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಪಾಕಿಸ್ತಾನದ ರಾಜಕಾರಣಿಯೊಬ್ಬರು ಶ್ಲಾಘಿಸಿದರೆ, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಈ ವಿಚಾರ ಸುದ್ದಿಯಲ್ಲಿರುವಾಗಲೇ ಈಗ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಅವರು ಪ್ರಿಯಾಂಕಾ ಗಾಂಧಿಯವರಿಗೆ ಬ್ಯಾಗೊಂದನ್ನು ಗಿಫ್ಟ್ ನೀಡಿದ್ದಾರೆ.
ಭುವನೇಶ್ವರ್ ಸಂಸದೆಯಾಗಿರುವ ಸಾರಂಗಿ, ಪಾರ್ಲಿಮೆಂಟ್ ಕಾರಿಡಾರ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಬ್ಯಾಗ್ ನೀಡಿದ್ದಾರೆ. ಸಾರಂಗಿಯಿಂದ ಬ್ಯಾಗ್ ಪಡೆದ ಪ್ರಿಯಾಂಕಾ ಗಾಂಧಿ, ಅದರ ಮೇಲೆ ಏನು ಬರೆಯಲಾಗಿದೆ ಎಂಬುದನ್ನು ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ. ಈ ಬ್ಯಾಗಿನ ಮೇಲೆ 1984 ಎಂದು ಬರೆಯಲಾಗಿದೆ.
ಪ್ರಿಯಾಂಕಾ ಗಾಂಧಿ ಅಜ್ಜಿ ಇಂದಿರಾಗಾಂಧಿ ಸಾವಿನ ನಂತರ ಈ ಸಿಖ್ ದಂಗೆ ನಡೆದಿತ್ತು, ಇದಾರಲ್ಲಿ ಸಿಖ್ ಸಮುದಾಯವನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗಿತ್ತು. ಇಂದಿರಾಗಾಂಧಿ ಹತ್ಯೆಗೆ ಪ್ರತೀಕಾರವಾಗಿ ಈ ಸಿಖ್ ಹತ್ಯಾಕಾಂಡ ನಡೆದಿತ್ತು. ಹಲವು ಕಾಂಗ್ರೆಸ್ ನಾಯಕರು ಈ ದಂಗೆಯಲ್ಲಿ ಭಾಗಿಯಾದ ಆರೋಪವಿತ್ತು.
1984ರ ದಂಗೆ ಕುರಿತು ನೆನಪಿಸುವ ಬ್ಯಾಗ್ ನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ವಿಷಯವನ್ನು ಸಹ ಪ್ರಿಯಾಂಕಾ ಗಾಂಧಿ ತನ್ನ ಬ್ಯಾಗ್ ನೊಂದಿಗೆ ಪ್ರಸ್ತಾಪಿಸಲಿ ಎಂದು ಬಿಜೆಪಿ ಸಂಸದೆ ಹೇಳಿದ್ದಾರೆ.
ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಸೂಚಿಸುವ ಸಲುವಾಗಿ ಸೋಮವಾರ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಪ್ಯಾಲೆಸ್ತೀನ್ ಎಂದು ಬರೆದ ಬ್ಯಾಗ್ ನೊಂದಿಗೆ ಬಂದಿದ್ದರು. ಮಂಗಳವಾರ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂ ಮತ್ತು ಕ್ರಿಶ್ಚಿಯನ್ನರ ಪರವಾಗಿ ನಿಲ್ಲಿ ಎಂಬ ಸಂದೇಶವಿರುವ ಬ್ಯಾಗ್ ನೊಂದಿಗೆ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಬಂದಿದ್ದರು.