ವಿದ್ಯುತ್‌ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ ಕುಶಾಲನಗರ:

ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ‌ನಡೆಯಿತು. ನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದ ಮುಂದೆ ಪ್ರತಿಭಟಿಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ‌ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ವಿ.ಎನ್.ಉಮಾಶಂಕರ್, ಉಚಿತ ಘೋಷಣೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿ ಅಧಿಕಾರ ಹಿಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ನಂತರ ಘೋಷಣೆಗಳನ್ನು ಜಾರಿಗೊಳಿಸಲು ಷರತ್ತುಗಳನ್ನು ವಿಧಿಸುತ್ತಿರುವುದು ಖಂಡನೀಯ. ಉಚಿತ ಎಂದ ಮೇಲೆ‌ ಕಂಡಿಷನ್ ರಹಿತವಾಗಿ ಎಲ್ಲರಿಗೂ ಜಾರಿಗೊಳಿಸಬೇಕಿದೆ ಎಂದರು.

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಮೋಸ ಹೋದ ಮತದಾರರು ಬಿಜೆಪಿಯ‌ ಕೈ ಹಿಡಿಯಲಿದ್ದಾರೆ. ಬಿಜೆಪಿ ಖಂಡಿತವಾಗಿ ಕಾಂಗ್ರೆಸ್‌ಗಿಂತ ಮೇಲುಗೈ ಸಾಧಿಸಲಿದೆ ಎಂದು ಹೇಳಿದರು.

ಮತ್ತೋರ್ವ ಹಿರಿಯ‌ ಮುಖಂಡ ಜಿ.ಎಲ್.ನಾಗರಾಜ್ ಮಾತನಾಡಿ, ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಒಂದು ಸರಕಾರದ ವಿರುದ್ದ ಹೋರಾಟಗಳು ಪ್ರಾರಂಭವಾಗುತ್ತದೆ ಎಂದರೆ ಅದು‌ ನಾಚಿಗೆಗೇಡು. ನೈಜ ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ಲಭಿಸಲಿದೆ. ಅಭಿವೃದ್ಧಿ ಯೋಜನೆಗಳು ಉಳ್ಳವರ ಪಾಲಾಗದಂತೆ, ಚುನಾವಣಾ ಮುನ್ನ ಕೊಟ್ಟ‌ ಮಾತಿನಂತೆ ಸರಕಾರ ನಡೆದುಕೊಳ್ಳಬೇಕಿದೆ ಎಂದರು.

ಈ ಸಂದರ್ಭ ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ವಕ್ತಾರ ಕೆ.ಜಿ.ಮನು, ಪುರಸಭೆ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ರೂಪಾ ಉಮಾಶಂಕರ್, ಶೈಲಾ ಕೃಷ್ಣಪ್ಪ, ಅಮೃತ್ ರಾಜ್, ಕೂಡುಮಂಗಳೂರು ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಪ್ರಮುಖರಾದ ನವನೀತ್, ಮಧುಸೂದನ್, ಪ್ರವೀಣ್, ಚಂದ್ರಶೇಖರ್, ಬೋಸ್‌ಮೊಣ್ಣಪ್ಪ, ಬಿ.ಜೆ.ಅಣ್ಣಯ್ಯ, ಆದರ್ಶ್, ಸುಮನ್ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!