ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಪ್ರೀತಿಸಿದ ಯುವತಿಯನ್ನ ಅಪಹರಿಸಿ ಮರುಭೂಮಿಯಲ್ಲಿ ಸಪ್ತಪದಿ ತುಳಿದ ಘಟನೆ ರಾಜಸ್ಥಾನದ ಜೈಸಲ್ಮೇರ್ ಸಿನಿ ಫಕ್ಕಿಯಲ್ಲಿ ನಡೆದಿದೆ. ಯುವತಿಗೆ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ಎರಡೂ ಕಡೆಯ ಹಿರಿಯರು ಜೂನ್ 12ಕ್ಕೆ ಮದುವೆಗೆ ಮುಹೂರ್ತ ಕೂಡ ಫಿಕ್ಸ್ ಮಾಡಿದ್ದಾರೆ. ಈ ವೇಳೆ ಕೆಲವು ಗೂಂಡಾಗಳು ಬಂದು ಆಕೆಯನ್ನು ಅಪಹರಿಸಿ ಮರುಭೂಮಿಗೆ ಕರೆದೊಯ್ದಿದ್ದಾರೆ.
ಅವರಲ್ಲಿ ಉಪೇಂದ್ರ ಎಂಬುವವ ಒಣಹುಲ್ಲಿಗೆ ಬೆಂಕಿ ಹಾಕಿ ಅವಳನ್ನು ಎತ್ತಿಕೊಂಡು ಬೆಂಕಿಯ ಸುತ್ತಲೂ ಏಳು ಹೆಜ್ಜೆ ನಡೆದನು. ನನ್ನನ್ನು ಬಿಟ್ಟುಬಿಡು ಎಂದು ಯುವತಿ ಗೋಗರೆದರೂ ಲೆಕ್ಕಿಸದೆ ಸಪ್ತಪದಿ ತುಳಿದಿದ್ದಾನೆ. ಬಳಿಕ ಈಗ ನಾವಿಬ್ಬರೂ ಮದುವೆಯಾಗಿದ್ದೇವೆ ನೀನು ಬೇರೆ ಮದುವೆಯಾಗಬೇಡ ಎಂದು ತಾಕೀತು ಮಾಡಿ ಅವಳನ್ನು ಅಲ್ಲಿಂದ ಬಿಟ್ಟು ಹೋಗಿದ್ದಾನೆ.
ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಸೂಚಿಸಿದ್ದಾರೆ.