ಹೊಸದಿಗಂತ ಚಿತ್ರದುರ್ಗ :
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಮೀಸಲಾತಿ ರದ್ದುಪಡಿಸುತ್ತೇವೆಂದು ರಾಹುಲ್ ಗಾಂಧಿ ವಿದೇಶದಲ್ಲಿ ಕುಳಿತು ಹೇಳಿರುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್ ಸಿದ್ದಾಪುರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೀಸಲಾತಿ ತೆಗೆಯುತ್ತೇವೆಂದು ಅಮೇರಿಕಾದಲ್ಲಿ ಹೇಳಿರುವುದನ್ನು ನೋಡಿದರೆ ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆನ್ನುವುದು ಖಚಿತವಾಯಿತು ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಎಸ್ಸಿ.ಪಿ. ಟಿ.ಎಸ್ಪಿ. ಯೋಜನೆಯ 25 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?
ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಹೊಡೆದಿರುವ ದಲಿತ ವಿರೋಧಿ ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಅಂತ್ಯಕ್ರಿಯೆಗೂ ಜಾಗ ಕೊಡಲಿಲ್ಲ. ರಾಹುಲ್ ಗಾಂಧಿ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಜಿ.ಟಿ.ಸುರೇಶ್ ಸಿದ್ದಾಪುರ ಎಚ್ಚರಿಸಿದರು.
ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಮಾತನಾಡಿ, ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ ಮೋದಿ ಅವರನ್ನು ಅಸ್ಥಿರಗೊಳಿಸಲು ರಾಹುಲ್ ಗಾಂಧಿ ಇಂತಹ ಹುಚ್ಚು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಹಿಂದು-ಮುಸಲ್ಮಾನರ ನಡುವೆ ನಡೆದ ಕೋಮುಗಲಭೆಗೆ ಕಾಂಗ್ರೆಸ್ ಕಾರಣ ಎಂದು ದೂರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂಬ ಹಗಲು ಗನಸು ಕಾಣುತ್ತಿರುವ ರಾಹುಲ್ ಗಾಂಧಿ ಭಾರತದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಅಮೇರಿಕಾದಲ್ಲಿ ಹೇಳಿರುವುದು ಹುರುಳಿಲ್ಲದ ಮಾತು. ಒಬ್ಬ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಯೋಗಿ ಆದಿತ್ಯನಾಥ್ ಅವರಂತವರು ಹುಟ್ಟಿಕೊಳ್ಳುತ್ತಾರೆಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಮಾತನಾಡಿ, ಎಸ್ಸಿ, ಎಸ್ಟಿಗಳ ಮೀಸಲಾತಿಯನ್ನು ತೆಗೆದು ಹಾಕುತ್ತೇವೆಂದು ರಾಹುಲ್ ಗಾಂಧಿ ವಿದೇಶದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿರೋಧಿಗಳು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ಖಜಾಂಚಿ ಮಾಧುರಿ ಗಿರೀಶ್, ಶಿವಣ್ಣಾಚಾರಿ, ಎಸ್ಸಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ, ಮಂಜು, ಕೃಷ್ಣ, ಪ್ರಕಾಶ್, ಬಸವೇಶ್, ಶಂಭು, ಪಲ್ಲವಿ ಪ್ರಸನ್ನ, ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕಿರಣ್, ಪಾಂಡು, ಪರಶುರಾಮ್, ಭರತ್, ಜನಾರ್ಧನಸ್ವಾಮಿ, ರಾಮು, ವಸಂತಕುಮಾರ್, ವೀರೇಶ್ ಜಾಲಿಕಟ್ಟೆ, ನಗರಸಭೆ ಸದಸ್ಯ ಹರೀಶ್, ಪ್ರಭು, ಉದಯ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶೈಲಜಾರೆಡ್ಡಿ, ಉಪಾಧ್ಯಕ್ಷೆ ಶ್ಯಾಮಲಾ ಶಿವಪ್ರಕಾಶ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಬಸಮ್ಮ, ಭಾರತಿ, ವೀಣ, ರಜಿನಿ, ಕವನ, ಕವಿತ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.