Wednesday, June 7, 2023

Latest Posts

ಒಕ್ಕಲಿಗರಿಗೆ, ಲಿಂಗಾಯತರಿಗೆ ಕೊಟ್ಟಿರೋ ಮೀಸಲು ತೆಗಿತೀರಾ?- ಸಿದ್ದರಾಮಯ್ಯ, ಡಿಕೆಶಿಗೆ ಬಿಜೆಪಿ ಪ್ರಶ್ನೆ

ಹೊಸದಿಗಂತ ವರದಿ ಬೆಂಗಳೂರು:

ವಿವಿಧ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ವಾಪಸ್ ಪಡೆಯುತ್ತೇವೆ ಎನ್ನುತ್ತಿರುವ ಕಾಂಗ್ರೆಸ್, ಯಾವ ಮೀಸಲಾತಿಯನ್ನು ತೆಗೆಯಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ವೇಳೆ ಮೀಸಲಾತಿ ರದ್ದು ಪಡಿಸುವುದಾಗಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇಕಡ 3ರಿಂದ 7ಕ್ಕೆ, ಪರಿಶಿಷ್ಟ ಜಾತಿಗೆ ಶೇಕಡ 15ರಿಂದ 17ಕ್ಕೆ ಹೆಚ್ಚಿಸಿ ಆದೇಶ ಜಾರಿ ಮಾಡಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಆದೇಶ ಪಾಲನೆಯಾಗುತ್ತಿದೆ. ಇದೀಗ ಮೀಸಲಾತಿ ತೆಗೆಯುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ವೀರಶೈವರಿಗೆ, ಒಕ್ಕಲಿಗರಿಗೆ ಇಲ್ಲವೇ ಇತರ ಯಾವ ವರ್ಗಕ್ಕೆ ನೀಡಿರುವ ಮೀಸಲಾತಿ ರದ್ದು ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.

ಯಾರ ಬಳಿಯೂ ಕಾಂಗ್ರೆಸ್ ಚರ್ಚೆ ಮಾಡಿಲ್ಲ: ಹೆಚ್ಚುವರಿ ಮೀಸಲಾತಿ ಕುರಿತು ಪರಿಶಿಷ್ಟ ಪಂಗಡ ಸಮುದಾಯದ ಸ್ವಾಮೀಜಿ ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್ ಅವರ ಬಳಿ ಚರ್ಚೆ ಮಾಡಿಲ್ಲ. ಒಳ ಮೀಸಲಾತಿ ಕುರಿತು ಹೋರಾಟ ನಡೆಸುತ್ತಿದ್ದ ಬಂಜಾರ ಸಮುದಾಯಕ್ಕೆ ಒಮ್ಮೆಯೂ ಭರವಸೆ ನೀಡಿಲ್ಲ. ಬೋವಿ, ಲಂಬಾಣಿ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ಬಿಜೆಪಿ ಕೈಬಿಡುವುದಿಲ್ಲ, ಯಾವ ಆಧಾರದಲ್ಲಿ ಮೀಸಲಾತಿ ನೀಡಬೇಕೋ ಅದರಂತೆ ಬಿಜೆಪಿ ಮೀಸಲಾತಿ ಕಲ್ಪಿಸಲಿದೆ. ಪರಿಶಿಷ್ಟ ಜಾತಿಯ ಉಪ ಜಾತಿಯಾದ ಅಲೆಮಾರಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ ೧ ರಷ್ಟು ಮೀಸಲಾತಿ ಒದಗಿಸಲಾಗಿದೆ. ಸಾಮಾಜಿಕ ನ್ಯಾಯ ಒದಗಿಸುವುದಕ್ಕೆ ಬಿಜೆಪಿ ಬದ್ಧವಾಗಿದೆ ಎಂದರು.

ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ: ಪರಿಶಿಷ್ಟ ಜಾತಿಗೆ 37, ಪರಿಶಿಷ್ಟ ಪಂಗಡಕ್ಕೆ 17 ಸ್ಥಾನಗಳನ್ನು ನೀಡಲಾಗಿದ್ದು, ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ವೀರಶೈವರು ಬಿಜೆಪಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದರಿಂದ ಈ ಸಮುದಾಯದ 68 ಮಂದಿಗೆ ಅವಕಾಶ ನೀಡಿ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಹಾಗೆಯೇ ಒಕ್ಕಲಿಗ ಸಮುದಾಯದ 41 ಮಂದಿಗೆ ಅವಕಾಶ ನೀಡಲಾಗಿದೆ. ಈಡಿಗ, ಕುರುಬ, ರೆಡ್ಡಿ, ತಿಗಳ ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು.

ಮುಂದಿನ ಐದು ವರ್ಷ ಡಬಲ್ ಇಂಜಿನ್ ಸರ್ಕಾರ: ಡಬಲ್ ಇಂಜಿನ್ ಸರ್ಕಾರ ಮುಂದಿನ ಐದು ವರ್ಷ ಮುಂದುವರೆಯಲು ಈ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚು ತೊಡಗಿಸಿಕೊಳ್ಳಬೇಕು. ಕಾಂಗ್ರೆಸ್ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು. ಬಿಜೆಪಿ ಸರ್ಕಾರದ ಕಾರ್ಯವೈಖರಿ ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಮತಾಂತರಗೊಂಡವರಿಗೆ ಮೀಸಲಾತಿ ಮುಂದವರಿಸುವ ಕುರಿತಂತೆ ಕೇಂದ್ರ ಸರ್ಕಾರ ಆಯೋಗ ರಚನೆ ಮಾಡಿದೆ. ಆದರೆ, ನಿನ್ನೆ ತಮಿಳುನಾಡು ವಿಧಾನಸಭೆಯಲ್ಲಿ ಮತಾಂತರಗೊಂಡ ಆದಿದ್ರಾವಿಡರಿಗೆ ಮೀಸಲಾತಿ ಮುಂದುವರಿಸುವ ಆತುರದ ನಿರ್ಣಯ ಅಂಗೀಕರಿಸಲಾಗಿದೆ ಎಂದು ಎ.ನಾರಾಯಣಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!