Sunday, October 1, 2023

Latest Posts

ನೆನೆಗುದಿ ಯೋಜನೆಗಳಿಗೆ ಮರುಜೀವ ಕೊಟ್ಟಿದ್ದು ಬಿಜೆಪಿ, ಕಾಂಗ್ರೆಸ್ಸಿನಿಂದಲೇ ವಿಳಂಬ- ಮೇಕೆದಾಟು ಕುರಿತು ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಾಂಗ್ರೆಸ್‌ಗೆ ಮತ್ತು ಅದರ ನಾಯಕರಿಗೆ ಒಂದು ಕ್ಯಾರೆಕ್ಟರ್ ಇಲ್ಲ. ಸ್ವಾರ್ಥದ ರಾಜಕೀಯ, ಅಧಿಕಾರದ ಹಪಾಹಪಿತನಕ್ಕೆ ಮೇಕೆದಾಟು ಪಾದಯಾತ್ರೆ ನಡೆದಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಒಪ್ಪಿಗೆ ಸಿಕ್ಕಿದ ಬಳಿಕ ಮೇಕೆದಾಟು ವಿಚಾರದಲ್ಲಿ ವಿಳಂಬ ಮಾಡುವುದಿಲ್ಲ. ನಿಜಲಿಂಗಪ್ಪ ಅವರ ಕಾಲದಿಂದ ಪ್ರಾರಂಭಿಸಿದ ಯೋಜನೆ ಇಲ್ಲಿಯವರೆಗೆ ಯಾಕೆ ಬಂತು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಬೇಕಲ್ಲವೇ? ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿದ ಡಿ.ಕೆ.ಶಿವಕುಮಾರ್ ಅವರ ಪ್ರಮುಖ ಹೆಜ್ಜೆ ಗುರುತುಗಳು ಏನು ಎಂದು ಪ್ರಶ್ನಿಸಿದರು.

ಬಂಡೆ ನುಂಗೋದು, ಗುಡ್ಡೆ ನುಂಗೋದು, ಗೋಮಾಳ ನುಂಗೋದೇ ಶಿವಕುಮಾರ್ ಅವರ ಸಾಧನೆ ಎಂದು ಆರೋಪಿಸಿದ ಅವರು, ಮೇಕೆದಾಟು ಯೋಜನೆ ವಿಳಂಬದಿಂದ ಯೋಜನಾ ವೆಚ್ಚ ₹ 5000 ಕೋಟಿಯಿಂದ ₹ 10,000 ಕೋಟಿಗೆ ಏರಿದೆ ಎಂದರು.

ದಿಲ್ಲಿಗೆ ಹಿಮಾಚಲಪ್ರದೇಶದಿಂದ ಕುಡಿಯುವ ನೀರು ಸರಬರಾಜು ಮಾಡುವ 55 ವರ್ಷಗಳ ಕಾಲ ಕಾಂಗ್ರೆಸ್‌ನಿಂದಾಗಿ ನೆನೆಗುದಿಗೆ ಬಿದ್ದ ರೇಣುಕುಂಜ್ ಯೋಜನೆಯನ್ನು ನರೇಂದ್ರ ಮೋದಿ ಅವರು ಆರು ತಿಂಗಳ ಹಿಂದೆ ಪೂರ್ಣಗೊಳಿಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅಸ್ಸಾಂನಲ್ಲಿ ಬಿಗಾನೆಲ್ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದು, ಅದನ್ನು 2019ರಲ್ಲಿ ಬಿಜೆಪಿ ಕೇಂದ್ರ ಸರಕಾರ ಪೂರ್ಣಗೊಳಿಸಿದೆ. ನುಡಿದಂತೆ ನಡೆಯುವ ಸರಕಾರ ನಮ್ಮದು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ್ದು ಕೇವಲ ಶಂಕುಸ್ಥಾಪನೆಯ ಸರಕಾರವಾಗಿತ್ತು. 1500ಕ್ಕೂ ಹೆಚ್ಚು ಯೋಜನೆಗಳು ಹಾಗೇ ಉಳಿದಿದ್ದವು. ಅಂಥ ಯೋಜನೆಗಳನ್ನು ಪೂರ್ಣಗೊಳಿಸಲು ₹ 14 ಲಕ್ಷ ಕೋಟಿ ಹೂಡುವ ನಿರ್ಧಾರವನ್ನು ನರೇಂದ್ರ ಮೋದಿ ಅವರು ಜಾರಿಗೊಳಿಸಿದರು ಎಂದು ವಿವರಿಸಿದರು.

ಕೀಳು ಮಟ್ಟದ ಭಾಷೆ ಬಳಸುವುದು ರಾಜಕೀಯ ಸಂಸ್ಕೃತಿಯೇ? ಕೊತ್ವಾಲ್ ರಾಮಚಂದ್ರನ ಗುರುಕುಲದಲ್ಲಿ ಕಲಿತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ ಮಹೇಶ್, ಕಾಂಗ್ರೆಸ್ ನಾಟಕವನ್ನು ದೇಶದ ಜನರು ನೋಡಿದ್ದಾರೆ. ಮೇಕದಾಟುವನ್ನೂ ಬಿಜೆಪಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಘಟ್ಟ ಸುದ್ದಿಗೋಷ್ಠಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!