ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮೇಕೆದಾಟು ಅಣೆಕಟ್ಟೆ ಯೋಜನೆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನಡೆಯುತ್ತಿರುವ ಶೀತಲ ಸಮರದ ನಡುವೆ ಕಾಂಗ್ರೆಸ್ ಸ್ಟಂಟ್ ಮಾಡುತ್ತಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಕಾನೂನಾತ್ಮಕ ವಿಚಾರ ಇದೆ. ಹೀಗಿರುವಾಗ ಕಾಂಗ್ರೆಸ್ ಪಾದಯಾತ್ರೆ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
2007ರಲ್ಲಿ ಮೇಕೆದಾಟು ಯೋಜನೆಗೆ ನದಿ ನೀರು ಹಂಚಿಕೆ ಕುರಿತ ಟ್ರಿಬ್ಯೂನಲ್ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸರಕಾರ ಬಲವಾದ ಪ್ರತಿವಾದ ಮಂಡಿಸಿತು. ಮೇಲಿನ ರಾಜ್ಯವಾಗಿ ನಮಗೆ ಅದರ ಮೇಲೆ ನಿಯಂತ್ರಣ ಇದೆ ಎಂದು ಕರ್ನಾಟಕ ವಾದ ಮುಂದಿಟ್ಟಿತು. ಅಣೆಕಟ್ಟೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿತು. 2013ರಿಂದ 2018ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿತು ಎಂದು ಆಕ್ಷೇಪಿಸಿದರು.
ಡಿಪಿಆರ್ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲು ಎರಡು ವರ್ಷ ಬೇಕಾಯಿತು. 4 ಜಿ ಕ್ಲಿಯರೆನ್ಸ್ ಪಡೆಯಲು ಎರಡು ವರ್ಷ ಬೇಕಾಯಿತು. ತಂತ್ರಜ್ಞಾನ, ಕಂಪೆನಿ ಆಯ್ಕೆಗೆ ಮೂರು ವರ್ಷ ಬೇಕಾಯಿತು. ಕಡತಗಳ ಮೇಲೆ ಕುಳಿತು ಧೂಳು ಪೇರಿಸುವ ಪರಿಸ್ಥಿತಿಯನ್ನು ಆಗಿನ ಕಾಂಗ್ರೆಸ್ ಸರಕಾರ ನಿರ್ಮಾಣ ಮಾಡಿತ್ತು. ನಮ್ಮ ಸರಕಾರವು ಡಿಪಿಆರ್ ಅನ್ನು ಕೂಡಲೇ ಕೇಂದ್ರಕ್ಕೆ ಸಲ್ಲಿಸಿದೆ. ಡಿ.ಕೆ.ಶಿವಕುಮಾರ್ ಹಿಂದೆ ಇಂಧನ ಸಚಿವರು ಆಗಿದ್ದರು. ಆದರೆ, ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದರೇ? ಎಂದು ಪ್ರಶ್ನಿಸಿದರು.
ಯೋಜನೆಯನ್ನು ಮುನ್ನೆಲೆಗೆ ತಂದಿದ್ದೇ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರಕಾರ ಎಂದ ಅವರು, 2044-45 ಕ್ಕೆ ಬೆಂಗಳೂರಿಗೆ 63 ಟಿಎಂಸಿ ಅಡಿ ನೀರು ಬೇಕು. ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ಇದಕ್ಕೆ ಇದೆ. ಆದರೆ, ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಒಮಿಕ್ರಾನ್ ಸಂದರ್ಭದಲ್ಲೇ ಈ ಪಾದಯಾತ್ರೆ ನಡೆಸಬೇಕಿತ್ತೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಘಟ್ಟ ಇದ್ದರು.