ಗ್ರಾಪಂ ಸರ್‌ಪಂಚ್ ಹುದ್ದೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡ ಬಿಜೆಪಿ- ಶಿಂಧೆ ಶಿವಸೇನಾ ಮೈತ್ರಿಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜೂನ್‌ನಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ- ಏಕನಾಥ್ ಶಿಂಧೆ ಅವರ ಶಿವಸೇನೆ ಬಣದ  ಆಡಳಿತಾರೂಢ ಮೈತ್ರಿಕೂಟವು ರಾಜ್ಯದಲ್ಲಿ ಭರ್ಜರಿ ಜಯಗಳಿಸಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಒಟ್ಟು 581 ಸ್ಥಾನಗಳಲ್ಲಿ 299 ಸರಪಂಚ್ ಸ್ಥಾನಗಳನ್ನು ಗೆದ್ದಿರುವ ಮೈತ್ರಿಕೂಟ ಜನಾದೇಶವನ್ನು ಒಲಿಸಿಕೊಂಡಿದೆ.
ವಿಜೇತ ಸರಪಂಚ್‌ ಸ್ಥಾನಗಳಲ್ಲಿ 259 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ,  40 ಸ್ಥಾನಗಳನ್ನು ಶಿಂಧೆ ಬಣ ಗೆದ್ದಿದೆ. ಈ ಮೂಲಕ ಬಿಜೆಪಿ-ಶಿಂಧೆ ಸೇನೆಯು ತನ್ನ ಎದುರಾಳಿಗಳಾದ ಎನ್‌ಸಿಪಿ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಮಣಿಸಿದೆ.
ಮುಖ್ಯಮಂತ್ರಿ ಶಿಂಧೆ ಅವರು, ಬಿಜೆಪಿ-ಶಿಂಧೆ ಸೇನೆಯ ವಿಜಯವನ್ನು ಮಹಾರಾಷ್ಟ್ರದ ಹೊಸ ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಜನಾದೇಶ ಎಂದು ಶ್ಲಾಘಿಸಿದ್ದಾರೆ. “ಜನರು ರಾಜ್ಯದ ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಇದು ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಶಿಂಧೆ-ಫಡ್ನವಿಸ್ ಸರ್ಕಾರವು ಕಳೆದ ತಿಂಗಳು ನಡೆದ ಮುಂಗಾರು ಅಧಿವೇಶನದಲ್ಲಿ ಸರಪಂಚ್ ಹುದ್ದೆಗಳಿಗೆ ನೇರ ಚುನಾವಣೆಯನ್ನು ಪರಿಚಯಿಸಿತ್ತು.ಈ ಕ್ರಮವನ್ನು ಸದನದಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಕೂಟ ವಿರೋಧಿಸಿತ್ತು. 17 ಜಿಲ್ಲೆಗಳ 51 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಸರಪಂಚ್‌ಗಳಿಗೆ ನಡೆದ ಚುನಾವಣೆಯಲ್ಲಿ ಶೇ.76ರಷ್ಟು ಮತದಾನ ನಡೆದಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿ, “ಬಿಜೆಪಿ-ಶಿಂಧೆ ಮೈತ್ರಿಕೂಟದ ಗೆಲುವು ಹೊಸ ಸರ್ಕಾರದ ಮೇಲೆ ಜನರ ನಂಬಿಕೆಯನ್ನು ತೋರಿಸುತ್ತದೆ. ಸಿಎಂ ಶಿಂಧೆ ನೇತೃತ್ವದ ಸರಕಾರವನ್ನು ಜನರು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ-ಶಿಂಧೆ ಗೆಲುವಿನ ಓಟ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!