ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್ ಅತೀಕನ ಸ್ನೇಹಿತ ಕರ್ನಾಟಕ ಕಾಂಗ್ರೆಸ್ ಸ್ಟಾರ್ ಪ್ರಚಾರಕ! – ಬಿಜೆಪಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಅತೀಕನ ಸ್ನೇಹಿತನನ್ನು ಕರ್ನಾಟಕ ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳುತ್ತಿದೆ. ಈ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ದೇಶದ್ರೋಹಿ, ಸಮಾಜ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸಿದೆ ಎಂದು ಕೇಂದ್ರ ಸಚಿವೆ ಮತ್ತು ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಉತ್ತರ ಪ್ರದೇಶದ ಇಮ್ರಾನ್ ಪ್ರತಾಪ್ ಗಡಿಯಾ ಹೆಸರಿದೆ. ಈತ ಇತ್ತೀಚೆಗೆ ಹತ್ಯೆಯಾದ ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್‍ನ ಆತ್ಮೀಯ ಸ್ನೇಹಿತ. ಅಲ್ಲದೆ ಅತೀಕ್ ಅಹ್ಮದ್ ತನ್ನ ಗುರುವೆಂದು ಹೇಳುತ್ತಿದ್ದ ಇಮ್ರಾನ್ ಅತೀಕ್‍ನ ಮೇಲೆ ಶಾಹಿರಿಗಳನ್ನು ಬರೆಯುತ್ತಿದ್ದ. ಇಮ್ರಾನ್‍ನ ಕಾರ್ಯಕ್ರಮಗಳಲ್ಲಿ ಅತೀಕ್ ಭಾಗವಹಿಸುತ್ತಿದ್ದ ಎಂದು ವಿವರಿಸಿದರು.

ಇಮ್ರಾನ್‍ನ ಶಾಹಿರಿಗಳು ದೇಶದ್ರೋಹದ, ಸಮಾಜ ವಿರೋಧಿ ಮತ್ತು ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತವೆ. ಹತ್ಯೆಯಾದ ಅತೀಕ್ ಅಹ್ಮದ್, ಅಶ್ರಫ್ ಅಹ್ಮದ್ ಮತ್ತು ಎನ್‍ಕೌಂಟರ್‌ನಲ್ಲಿ ಹತನಾದ ಅಸಾದ್ ನೊಂದಿಗೆ ಇಮ್ರಾನ್ ನಂಟು ಹೊಂದಿದ್ದ. ದೇಶದ್ರೋಹ ಕೆಲಸ ಮಾಡಿದ ಇದೇ ಇಮ್ರಾನ್ ನನ್ನು ಉತ್ತರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಕರೆತಂದು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಕಾಂಗ್ರೆಸ್ ಪಾಪದ ಕೆಲಸ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅತೀಕ್ ಅಹ್ಮದ್ ಮೇಲೆ ಕೊಲೆ, ಅತ್ಯಾಚಾರ, ಅಪಹರಣ, ದರೋಡೆ, ಜಮೀನು ಅತಿಕ್ರಮಣ ಸೇರಿದಂತೆ ವಿವಿಧ 102 ಪ್ರಕರಣಗಳಿದ್ದವು. ಇಂತಹ ಅಪರಾಧಿಗೆ ಇಮ್ರಾನ್ ತನ್ನ ಮನೆಯಲ್ಲಿ ಆತಿಥ್ಯ ನೀಡುತ್ತಿದ್ದ ಎಂದರು.

ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸ

ಟಿಪ್ಪು ಜಯಂತಿ ವಿರುದ್ಧ ಹೋರಾಟ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದ ಇಮ್ರಾನ್, ಮುಸ್ಲಿಮರಿಗೆ ತಲೆ ಬಗ್ಗಿಸುವುದು ಗೊತ್ತಿಲ್ಲ, ತಲೆ ಕಡಿಯುವುದು ಮಾತ್ರ ಗೊತ್ತು ಎಂದು ಹೇಳುವುದರ ಮೂಲ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದ. ಇನ್ನು ಪ್ರಯಾಗ್‍ರಾಜ್‍ನಲ್ಲಿ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾರ್ವಜನಿಕರಿಂದಲೇ ಹತ್ಯೆಯಾದ ಅತೀಕ್ ಅಹ್ಮದ್ ನೊಂದಿಗೆ ನಂಟು ಹೊಂದಿರುವವರನ್ನೆಲ್ಲಾ ಬಂಧಿಸುವಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಉತ್ತರಪ್ರದೇಶ ಭೇಟಿ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಮನವಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಸಹ ಇಂತಹ ಶಕ್ತಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‍ಗೆ ದೇಶದ್ರೋಹಿ ಮತ್ತು ಸಮಾಜ ದ್ರೋಹಿಗಳ ಮೇಲೆ ಪ್ರೀತಿ ಜಾಸ್ತಿ. ಮತ ಬ್ಯಾಂಕ್ ರಾಜಕೀಯಕ್ಕೆ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಎತ್ತಿಕಟ್ಟಲು ಕುಮ್ಮಕ್ಕು ನೀಡುತ್ತಿದೆ ಎಂದು ಕು.ಶೋಭಾ ಕರಂದ್ಲಾಜೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!