ಹೊಸದಿಂಗತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 30ರಂದು ಅಯೋಧ್ಯೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು . “ರಾಮಮಂದಿರ ಲೋಕಾರ್ಪಣೆಯ ದಿನ ದೇಶದ ಪ್ರತಿಯೊಂದು ಮನೆಯಲ್ಲೂ ರಾಮನ ಜ್ಯೋತಿ ಬೆಳಗಿಸಬೇಕು” ಎಂದು ಕರೆ ನೀಡಿದ್ದರು. ಈಗ ಬಿಜೆಪಿ ನಾಯಕರು ದೇಶದಲ್ಲಿ ಸಾಮರಸ್ಯ ಸಂದೇಶ ರವಾನಿಸುವ ದಿಸೆಯಲ್ಲಿ ಮಸೀದಿ, ದರ್ಗಾಗಳಲ್ಲೂ ದೀಪ ಬೆಳಗಿಸಲು ಮುಂದಾಗಿದ್ದಾರೆ.
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ.
ಇದಕ್ಕಾಗಿ ಅವರು 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಬೃಹತ್ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2,500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪೌಡರ್ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್ ತಿಳಿಸಿದ್ದಾರೆ.