ಸೂರ್ಯ ಚಂದ್ರರಷ್ಟೇ ಸತ್ಯ ಈ ಬಾರಿ ಕುಂದಗೋಳದಲ್ಲಿ ಬಿಜೆಪಿ ಗೆಲುವು : ಲಕ್ಷ್ಮಣ ಸವದಿ

ಹೊಸದಿಗಂತ ವರದಿ ಕುಂದಗೋಳ:

ಸೂರ್ಯ,ಚಂದ್ರ‌ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ಕುಂದಗೋಳ ವಿಧಾನ‌ ಸಭಾ ಕ್ಷೇತ್ರದಲ್ಲಿ ಬಿಜೆಪಿ‌ ಗೆಲ್ಲುವುದು ಅಷ್ಟೇ ಸತ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಶುಕ್ರವಾರ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಗುಡಗೇರಿ ಗ್ರಾಮದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಳೆದ ಬಾರಿ‌ ಕುಂದಗೋಳ ಕ್ಷೇತ್ರದ ಜನರು ಕಾಂಗ್ರೆಸ್ ಗೆಲ್ಲಿಸಿದ್ದರಿಂದ ಸಂಪೂರ್ಣ ಅಭಿವೃದ್ಧಿ ಕುಂಠಿತವಾಗಿದೆ. ಸಿ.ಸಿ.ಪಾಟೀಲ ಅವರು ಲೋಕೋಪಯೋಗಿ ಸಚಿವರಾದ ಬಳಿಕ ಈ ಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳು ಅಭಿವೃದ್ಧಿಯಾಗಿವೆ ಎಂದರು.

ಈ ಬಾರಿ ಕ್ಷೇತ್ರದ ಜನರು ತಪ್ಪು ಮಾಡದೆ ಬಿಜೆಪಿ ಗೆಲುವಿಗೆ ಶ್ರಮಿಸಬೇಕು. ಬಿಜೆಪಿ ಜಯಗಳಿಸಿದ್ದೆ ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಸ ಅಧ್ಯಾಯ ಬರೆಯಲಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿಕೊಡುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ವಿನಂತಿಸಿದರು.

ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ:

ಕುಂದಗೋಳ ವಿಧಾನ ಸಭಾ ಕ್ಷೇತ್ರದ ಗುಡಗೇರಿ ಗ್ರಾಮದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯಿತು. ಗ್ರಾಮದ ಕಾರ್ಗಿಲ್ ವೃತ್ತದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಥಯಾತ್ರೆ ಏರುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ರಾಜ್ಯ ಪ್ರಧಾನ‌ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸ್ಥಳೀಯ ಮುಖಂಡರಾದ ಎಂ.ಆರ್. ಪಾಟೀಲ, ಎಸ್.ಐ. ಚಿಕ್ಕನಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳ ಮಠದ ಸಾಥ್ ನೀಡಿದರು.‌

ಅಲ್ಲಿಂದ ಆರಂಭವಾದ ರಥಯಾತ್ರೆ ಗ್ರಾಮದ ಬೀದಿ ಬೀದಿಗಳಲ್ಲಿ ಸಾಗಿ ಅಂಚೆ ಕಚೇರಿ ಹತ್ತಿರದ ವೃತ್ತದಲ್ಲಿ ಮುಕ್ತಾಯವಾಗಿತು. ಯಾತ್ರೆಯುದ್ಧಕ್ಕೂ ಹರ ಹರ ಮೋದಿ, ಜಯ ಜಯ ಮೋದಿ, ಬಿಜೆಪಿ ಜೈ, ಪ್ರಧಾನಿ ಮೋದಿಗೆ ಜೈ, ಭಾರತ ಮಾತಾಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿದವು.

ಮಹಿಳೆ ತಂಡಗಳ ಡೊಳ್ಳು ಕುಣಿತ, ಜಗ್ಗಲಗಿ, ಸಕಲ ವಾದ್ಯ ಮೇಳ ರಥಯಾತ್ರೆಗೆ ಮೆರಗು ನೀಡಿದವು. ಲಂಬಾಣಿ ವೇಷದಲ್ಲಿ ಮಹಿಳೆಯರು ಸಾಕ್ಷಿಯಾದರು. ಸಂಪೂರ್ಣ ಗ್ರಾಮ ಕೇಸರಿ ಮಯವಾಗಿತ್ತು. ಮೆರವಣಿ ಸಾಗುತ್ತಿದ್ದಂತೆ ಕಾರ್ಯಕರ್ತ ಹಾಗೂ ಗ್ರಾಮಸ್ಥರು ರಥಕ್ಕೆ ಪುಷ್ಪವೃಷ್ಠಿ ಗೈದರು. ರಸ್ತೆಯ ಇಕ್ಕಲಲ್ಲಿ ನಿಂತಿದ್ದ ಜನರು ರಥದಲ್ಲಿದ್ದ ಬಿಜೆಪಿ ನಾಯಕರಿಗೆ ಕೈ ಬಿಸಿ ಸ್ವಾಗತಿಸುವುದು ಸಾಮಾನ್ಯವಾಗಿತ್ತು.

ಸುಡು ಬಿಸಿಲು ಲೆಕ್ಕಿಸದರೆ ಸಾವಿರಾರು ಜನರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇನ್ನೂ ಸ್ಥಳೀಯ ಮುಖಂಡರಾದ ಎಂ.ಆರ್. ಪಾಟೀಲ ಹಾಗೂ ಎಸ್.ಐ.‌ಚಿಕ್ಕನಗೌಡ ಪರ ಬೆಂಬಲಿಗರ ಘೋಷಣೆ ಸಾಮಾನ್ಯವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!