400 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಬಿಜೆಪಿ: ಗಾಲಿ ಜನಾರ್ಧನ ರೆಡ್ಡಿ

ಹೊಸದಿಗಂತ ವರದಿ, ರಾಯಚೂರು :

ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದoತೆ ಈ ಲೋಕಸಭಾ ಚುನಾವಣೆಯಲ್ಲಿ ೪೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಗುರುವಾರ ನಗರದ ಜಿಲ್ಲಾಧಿಕಾರಿಗಳು ಕಾರ್ಯಾಲಯದಲ್ಲಿ ಲೋಕಸಭೆಯ ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಭಾರತ ಜನತೆ ಈ ಬಾರಿ ಬಿಜೆಪಿಗೆ ೪೦೦ ಸ್ಥಾನಗಳಲ್ಲಿ ಗೆಲ್ಲಿಸಿಸುವುದಕ್ಕೆ ನಿರ್ಧರಿಸಿದ್ದು, ಈ ಗುರಿಯನ್ನು ಎನ್‌ಡಿಎ ಮೈತ್ರಿಕೂಟ ಸಾಧಿಸಲಿದೆ ಎಂದು ತಿಳಿಸಿದರು.

ಬಾಲಕಿಯನ್ನು ಕಿಡ್ನಾಪ್‌ಮಾಡಿ ಆಸ್ತಿಯನ್ನು ಬರೆಸಿಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕುರಿತು ಮಾಜಿ ಪ್ರಧಾನಿ ದೇವೇಗೌಡರ ಅವರ ಹೇಳಿಕೆಯು ಚಿಲ್ಲರೆ ಆಗಿದ್ದು, ಅವರ ಇಂತಹ ಹೇಳಿಕೆಗೆ ನಾನು ಪ್ರತಿಕ್ರೀಯೆ ನೀಡುವುದಿಲ್ಲ ಎನ್ನುವ ಮೂಲಕ ದೇವೇಗೌಡರು ಚಿಲ್ಲರೆ ಮಾತನಾಡುತ್ತಾರೆ ಎನ್ನುವ ಡಿಕೆಶಿ ಅವರ ಹೇಳಿಕೆಯಿಂದಲೇ ತಿಳಿಯುತ್ತದೆ ಕಾಂಗ್ರೆಸ್ ಹಿರಿಯರಿಗೆ ಗೌರವ ಕೊಡುವುದನ್ನು ಉಪ ಮುಖ್ಯಮಂತ್ರಿಗಳಿಗೆ ಕಲಿಸಿಲ್ಲ ಎನ್ನುವುದು ಎಂದರು.

ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ ರೀತಿ, ಅವರಿಗೆ ಗೌರವ ಸಲ್ಲಿಸಿದ ರೀತಿ ಬಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಹಾಗೂ ದೇಶದ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಮೋದಿ ಎಂದು ಕೂಗುವವರಿಗೆ ಕಪಾಳ ಮೋಕ್ಷ ಮಾಡಿ ಎಂದು ಶಿವರಾಜ ತಂಗಡಗಿ ಅನ್ನುವ ಮೂಲಕ ಈಗಾಗಲೇ ನಗೆಪಾಟಲಿಗೆ ಪಾತ್ರರಾಗಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಅವರು ಇಂತಹ ಹೇಳಿಕೆಯನ್ನು ನೀಡಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಇವರಿಬ್ಬರಿಗೂ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಅವಶ್ಯಕವಾಗಿದೆ ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜೈ ಶ್ರೀರಾಮ್ ಎನ್ನುವವರ ಮೇಲೆ ಪ್ರಕರಣವನ್ನು ದಾಖಲು ಮಾಡುತ್ತಿರುವುದಕ್ಕೆ ರಾಜ್ಯ ಮತ್ತು ದೇಶದ ಜನತೆನೇ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರರ ದೇವಾಲಯವನ್ನು ನಿರ್ಮಿಸುವ ಮೂಲಕ ಭಾರತೀಯರ ೫೦೦ ವರ್ಷದ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಕಾರಗೊಳಿಸುವ ಮೂಲಕ ಭಾರತೀಯ ಸಂಸ್ಕೃತಿಗೆ ಮತ್ತೊಂದು ಆಯಾಮವನ್ನು ಬರೆದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ವೆಂಕಟರಾವ್ ನಾಡಗೌಡ, ವಿರುಪಾಕ್ಷಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!