ಏ.24 ರಂದು ಚಿತ್ರದುರ್ಗಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಇದೇ ತಿಂಗಳ ೨೪ ರಂದು ಚಿತ್ರದುರ್ಗಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಬೃಹತ್ ರೋಡ್‌ಶೋ ನಡೆಸಲಾಗುವುದೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೧೯ ರಿಂದ ೨೧ ರವರೆಗೆ ಮೂರು ದಿನಗಳ ಕಾಲ ಚಿತ್ರದುರ್ಗದ ೩೫ ವಾರ್ಡ್‌ಗಳಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚಿಸಲಾಗುವುದು. ೨೧೬೭ ಬೂತ್‌ಗಳಲ್ಲೂ ಅಭಿಯಾನ ನಡೆಯಲಿದೆ. ೨೧ ರಂದು ರಾತ್ರಿ ೮ ಗಂಟೆಯೊಳಗಾಗಿ ಶೇ. ೯೬ ರಷ್ಟು ಮತದಾರರನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರ ಹಾಗೂ ನಗರದ ೩೫ ವಾರ್ಡ್‌ಗಳಲ್ಲಿ ಅಭಿಯಾನ ಸಂಚರಿಸಲು ತಯಾರಿ ನಡೆಸುತ್ತಿದ್ದು, ಗೋವಿಂದ ಕಾರಜೋಳರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಾಗುವುದು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಲವತ್ತು ಸೀಟುಗಳನ್ನು ಗೆಲ್ಲುವುದು ಕಷ್ಟ. ದೇಶದೆಲ್ಲೆಡೆ ಮೋದಿ ಅಲೆ ಇರುವುದರಿಂದ ಈ ಚುನಾವಣೆಯಲ್ಲಿ ಗೆಲ್ಲುವ ಗೋವಿಂದ ಕಾರಜೋಳರವರು ಕೇಂದ್ರ ಮಂತ್ರಿಯಾಗುವುದು ಖಚಿತ. ಕಾಂಗ್ರೆಸ್‌ಗೆ ಪಾರ್ಲಿಮೆಂಟ್‌ನಲ್ಲಿ ವಿರೋಧ ಪಕ್ಷದ ಸ್ಥಾನಮಾನ ಸಿಗುವುದೂ ಕಷ್ಟ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ಮತಯಾಚಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಹಿರಿಯೂರು ಹಾಗೂ ಪರಶುರಾಂಪುರಕ್ಕೆ ಆಗಮಿಸಲಿದ್ದಾರೆ. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಗೋವಿಂದ ಕಾರಜೋಳರವರ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಬುಧವಾರ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬಡಕುಡುಂಬದ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ. ಯುವಕರಿಗೆ ನಿರುದ್ಯೋಗ ಭತ್ಯೆ, ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಮಹಿಳೆಯರಿಗೆ ೨೫ ಲಕ್ಷ ಕೋಟಿ, ಯುವಕರಿಗೆ ೧೦ ಲಕ್ಷ ಕೋಟಿ ಹಾಗೂ ರೈತರ ಸಾಲ ಮನ್ನಾ ಮಾಡಲು ೧೫ ಲಕ್ಷ ಕೋಟಿ ಸೇರಿದಂತೆ ಒಟ್ಟು ೫೦ ಲಕ್ಷ ಕೋಟಿ ಹಣ ಬೇಕು ಎಂದರು.

ಭಾರತ ದೇಶದ ಬಜೆಟ್ ಗಾತ್ರ ೪೭ ಲಕ್ಷ ಕೋಟಿ. ಆದರೆ ಇವರ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ೫೦ ಲಕ್ಷ ಕೋಟಿ ಹಣ ಬೇಕಾಗುತ್ತದೆ. ವಾಸ್ತವದಲ್ಲಿ ನೋಡಿದಲ್ಲಿ ಇದಕ್ಕೆ ಹಣ ಎಲ್ಲಿಂದ ತರುತ್ತಾರೆ ಎಂದ ಅವರು, ಈ ರೀತಿ ಪೊಳ್ಳು ಭರವಸೆ ನೀಡುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸದಸ್ಯರುಗಳಾದ ಶಶಿಧರ್, ಹರೀಶ್, ಭಾಸ್ಕರ್, ತಾರಕೇಶ್ವರಿ, ಮಂಜುಳಾ, ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!