ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಏಳನೇ ಹಂತದ ಮತದಾನಕ್ಕೆ ಇನ್ಣೂ ಕೆಲವೇ ದಿನಗಳ ಬಾಕಿ ಉಳಿದಿವೆ.
ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮದವರನ್ನು ಉದ್ಧೇಶಿಸಿ ಮಾತನಾಡುತ್ತಾ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬುದು ಬಕ್ವಾಸ್ ವಾದವಾಗಿದ್ದು, 200 ಸ್ಥಾನಗಳಲ್ಲಿ ಗೆಲ್ಲುವುದು ಡೌಟ್ ಎಂದು ಭವಿಷ್ಯ ನುಡಿದಿದ್ದಾರೆ.
ದಿನ ಕಳೆದಂತೆ ನಿಮ್ಮ ಸೀಟುಗಳ ಸಂಖ್ಯೆ ಕುಸಿಯುತ್ತಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಆಸೆಯನ್ನು ಮರೆತುಬಿಡಿ. ಅದು ಬಕ್ವಾಸ್ ವಾದವಾಗಿದ್ದು, ನಿಮಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ. 200 ಸ್ಥಾನಗಳನ್ನೂ ನೀವು ಮೀರುವುದಿಲ್ಲ ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲಿಲ್ಲ. ಕರ್ನಾಟಕ, ಮಹಾರಾಷ್ಟ್ರದಲ್ಲಿ ದುರ್ಬಲವಾಗಿದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಲ್ಪ ಮಟ್ಟಿನ ಸ್ಪರ್ಧೆಯಿದೆ. ಹೀಗಿರುವಾಗ ನೀವು 400 ಸ್ಥಾನಗಳನ್ನು ಗೆಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಅಮಿತ್ ಶಾ ಅವರು ನನಗೆ ಹೇಳುವ ಬದಲು ಅವರು ಮೊದಲು ತಮ್ಮ ಕೆಲಸವನ್ನು ನೋಡಿಕೊಳ್ಳುವುದು ಸೂಕ್ತ. ನಾನು ರಾಜಕೀಯಕ್ಕೆ ಸೇರಿದ್ದು ಕೆಲಸ ಮಾಡುವುದಕ್ಕೆ ಅಲ್ಲ. ಚಿಕ್ಕವನಿಂದಲೂ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಜೂನ್ 4ರ ಬಳಿಕ ತಮ್ಮ ಕೆಲಸದ ಬಗ್ಗೆ ಅಮಿತ್ ಶಾ ಚಿಂತಿಸುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶದ ಯುವಜನತೆ, ರೈತರು, ಕಾರ್ಮಿಕರು ಹಾಗೂ ದುರ್ಬಲ ವರ್ಗದವರ ಪರವಾಗಿದೆ. ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಖಾಲಿ ಇರುವ 30 ಲಕ್ಷ ಸರ್ಕಾರಿ ಉದ್ಯೋಗವನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.