ಇಷ್ಟಕ್ಕೂ ಏನಿದೆ ಬಿಜೆಪಿ ಬಿಡುಗಡೆ ಮಾಡಿದ 16 ಭರವಸೆಗಳ ಪಟ್ಟಿಯಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ವೇಳೆ 16 ಭರವಸೆಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ.

ಬಿಜೆಪಿ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಬಿಜೆಪಿಯ ‘ಪ್ರಜಾ ಪ್ರಣಾಳಿಕೆ’ ಯಲ್ಲಿರುವ ಭರವಸೆಗಳು ಹೀಗಿವೆ :

1. ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುತ್ತೇವೆ.

2. ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಅರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ ವನ್ನು ಸ್ಥಾಪಿಸುತ್ತೇವೆ.

3. ‘ಪೋಷಣೆ’ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ.

4. ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುತ್ತೇವೆ.

5. ರಾಜ್ಯದಾದ್ಯಂತ ನಿವೇಶನ ರಹಿತ/ ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.

6. ‘ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ’ ಯೋಜನೆಯನ್ನು ಪ್ರಾರಂಭಿಸುತ್ತೇವೆ. ಈ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ – 10 ಸಾವಿರದವರೆಗೆ ತಾಳಿಯಾಗುವ ಠೇವಣಿ ನೀಡುತ್ತೇವೆ.

07. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ‘ಸುಲಲಿತ ಜೀವನ’ಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುತ್ತೇವೆ ಹಾಗೂ ಕಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತೇವೆ.

8.“ವಿಶ್ವೇಶ್ವರಯ್ಯ ವಿದ್ಯಾ ಯೋಜನೆ’ ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.

9. ‘ಸಮನ್ವಯ ಯೋಜನೆ’ ಇದರಡಿ ತ್ವರಿತಗತಿಯಲ್ಲಿ SME ಗಳು ಮತ್ತು ITI ಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ.

10. ಐಎಎಸ್/ಕೆಎಎಸ್/ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ಮಹತ್ವಾಕಾ೦ಕ್ಷೆಯ ಯುವಜನರಿಗೆ ವೃತ್ತಿ ಬೆಂಬಲವನ್ನು ಒದಗಿಸುತ್ತೇವೆ.

11. ‘ಮಿಷನ್ ಸ್ವಾಸ್ಥ್ಯ ಕರ್ನಾಟಕ’ದ ಅಡಿ ಸರ್ಕಾರಿ ಆಸ್ಪತ್ರೆ /ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪಿಸುತ್ತೇವೆ. ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸುತ್ತೇವೆ.

12. ನಮ್ಮಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು ‘ರಾಜ್ಯ ರಾಜಧಾನಿ ಪ್ರದೇಶ’ ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತೇವೆ. ಸುಲಲಿತ ಜೀವನಕ್ಕೆ ಅನುವುಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿಸುತ್ತೇವೆ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್‌ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುತ್ತೇವೆ.

13. ಕರ್ನಾಟಕವನ್ನು ಎಲೆಕ್ನಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್ ಗಳನ್ನು ಎಲೆಕ್ನಿಕ್ ಬಸ್‌ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ‘ಇಬಿ ಸಿಟಿ’ ಅಭಿವೃದ್ಧಿ.

14. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 2 30,000 ಕೋಟಿ ಮೊತ್ತದ ‘ಕೆ-ಅಗಿ ಫಂಡ್’ ಸ್ಥಾಪಿಸುತ್ತೇವೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್ ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್ ಗಳನ್ನು ಸ್ಥಾಪಿಸುತ್ತೇವೆ.

15. ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಿ ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು ಕಲ್ಯಾಣ ಸರ್ಕ್ಯೂಟ್‌ ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಕಾವೇರಿ ಸರ್ಕ್ಯೂಟ್ ಗಾಣಗಾಪುರ ಕಾರಿರ್ಡ್​​ರ್​​ ಅನ್ನು ಅಭಿವೃದ್ಧಿಪಡಿಸಲು 91,500 ಕೋಟಿ ವಿನಿಯೋಗಿಸುತ್ತೇವೆ.

16. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಬೆಂಗಳೂರಿನ ಆಚೆ ಸೃಷ್ಟಿಸುವ ಲಾಜಿಸ್ಟಿಕ್ಸ್‌ ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಸಂಯೋಜಿಸುವ ಮೂಲಕ ‘ಉತ್ಪಾದನಾ ಆಧರಿತ ಪ್ರೋತ್ಸಾಹ’ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!