ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಟಿ ರವಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಸಿಟಿ ರವಿ ಬಂಧನದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ.
ಮಾಧ್ಯಮದ ಮುಂದೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬಿಜೆಪಿಯ ಈ ವರ್ತನೆ ಭಾರತಾಂಬೆಗೆ ಅವಮಾನ ಎಂದು ಹೇಳಿದ್ದಾರೆ.
ಬಿಜೆಪಿಯವರ ಈ ವರ್ತನೆ ಇಡೀ ದೇಶಕ್ಕೆ, ಆ ಪಕ್ಷಕ್ಕೆ ಒಂದು ಅವಮಾನ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಸದನದಲ್ಲಿ ನಡೆದುಕೊಂಡ ರೀತಿಗೆ ನಾಚಿಕೆಯಾಗಬೇಕು. ಯಾವಾಗಲು ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ. ಶಾಸಕ ಮುನಿರತ್ನ ವಿಚಾರದಲ್ಲಿಯೂ ಬಿಜೆಪಿ ಹೀಗೆ ವರ್ತನೆ ಮಾಡಿತ್ತು. ಇದೀಗ ಈ ವಿಚಾರದಲ್ಲೂ ಇದೇ ರೀತಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಸರ್ಕಾರ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾ ಎಂಬ ಪ್ರಶ್ನೆಗೆ ಕಾನೂನೇ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿದೆ, ಸರ್ಕಾರವಲ್ಲ ಎಂದು ಹೇಳಿದ್ದಾರೆ.