ಡಿ. 12 ರಂದು ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ: ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ ಸತತ 7 ನೇ ಬಾರಿಗೆ ಭರ್ಜರಿ ಜಯಬೇರಿ ಬಾರಿಸಿದೆ. ಅಲ್ಲಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 150+ ಸ್ಥಾನ ಗೆದ್ದು ಅಧಿಕಾರಕ್ಕೆ ಏರಿದೆ. ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಘಟ್ಲೋಡಿಯಾ ಶಾಸಕ ಭೂಪೇಂದ್ರ ಪಟೇಲ್ ಇದೇ ಡಿ.12 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಿಸೆಂಬರ್ 12 ರಂದು ಮಧ್ಯಾಹ್ನ 2 ಗಂಟೆಗೆ ಭೂಪೇಂದ್ರ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
“ಗುಜರಾತ್ ಚುನಾವಣೆಯ ಫಲಿತಾಂಶಗಳು ಸಾಕಷ್ಟು ಸ್ಪಷ್ಟವಾಗಿವೆ. ಜನರು ಗುಜರಾತ್‌ನಲ್ಲಿ ಅಭಿವೃದ್ಧಿಯ ಪಯಣವನ್ನು ಮುಂದುವರಿಸಲು ಮನಸ್ಸು ಮಾಡಿದ್ದಾರೆ. ನಾವು ಜನರ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದಾರೆ” ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಭೂಪೇಂದ್ರ ಪಟೇಲ್ ರಾಜಕೀಯ ಪಯಣ:
ಬೆಂಬಲಿಗರಿಂದ ಪ್ರೀತಿಯಿಂದ ‘ದಾದಾ’ ಎಂದು ಕರೆಸಿಕೊಳ್ಳುವ ಭೂಪೇಂದ್ರಭಾಯಿ ರಜನಿಕಾಂತ್‌ಭಾಯ್ ಪಟೇಲ್ ಗುಜರಾತ್‌ನ 17 ನೇ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಪಟ್ಟಕ್ಕೇರಲಿದ್ದಾರೆ.
ಅಹಮದಾಬಾದ್‌ನಲ್ಲಿ ಜನಿಸಿದ ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ, ಈ ಹಿಂದೆ ಆನಂದಿಬೆನ್ ಪಟೇಲ್ ಅವರು ಈ ಹುದ್ದೆಯನ್ನು ಹೊಂದಿದ್ದರು.
ಅವರು 2017 ರಲ್ಲಿ 1,17,000 ಮತಗಳ ಅಂತರದಿಂದ ಗೆದ್ದಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ಅವರನ್ನು ಸೋಲಿಸಿದರು. ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಘಟ್ಲೋಡಿಯಾ ಕ್ಷೇತ್ರದಲ್ಲಿ ಶೇಕಡಾ 72 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದರು.
ಭೂಪೇಂದ್ರ ಪಟೇಲ್ ರಾಜಕೀಯದಲ್ಲಿ ಹೊಸ ಮುಖವಲ್ಲ. ಈ ಮೊದಲು ಅವರು ಅಹಮದಾಬಾದ್ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ಪಟೇಲ್, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!