ಹೊಸದಿಗಂತ ಡಿಜಿಟಲ್ ಡೆಸ್ಕ್:
4 ಲಕ್ಷ ಕೋಟಿ ರೂಗೂ ಹೆಚ್ಚು ಗಾತ್ರದ ಬಜೆಟ್ ಅನ್ನು ಹಲಾಲ್ ಬಜೆಟ್ ಎನ್ನುತ್ತಿರುವುದು ಬಿಜೆಪಿಯ ಕೊಳಕು ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿಯವರ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು 1994-95ರಲ್ಲಿ ಕೇವಲ 13,000 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದೆ. ಈಗ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರೂ. ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. ಕಳೆದ ಬಾರಿಗಿಂತ ಈಬಾರಿ 38166 ಕೋಟಿ ರೂ. ಹೆಚ್ಚಾಗಿದ್ದು ಬಜೆಟ್ ಬೆಳವಣಿಗೆಯ ದರ ಶೇ. 10.3 ರಷ್ಟು ಇದೆ ಎಂದರು.
ಎಸ್ಸಿ-ಎಸ್ಟಿಗೆ ಎಸ್ಸಿಪಿ/ಟಿಎಸ್‌ಪಿ ಅಡಿ 42,000 ಕೋಟಿ ರು. ನೀಡಿದ್ದೇವೆ. ಅಲ್ಪಸಂಖ್ಯಾತರು, ಎಸ್ಸಿ,ಎಸ್ಟಿ, ಒಬಿಸಿ ಎಲ್ಲರಿಗೂ ಅನುದಾನ ನೀಡಿದ್ದೇವೆ. ಬೌದ್ಧರು, ಜೈನರು, ಕ್ರಿಶ್ಚಿಯನ್ನರು, ಮುಸಲ್ಮಾನರರು ಹೀಗೆ ಎಲ್ಲ ಅಲ್ಪಸಂಖ್ಯಾತರಿಗೆ ಒಟ್ಟಾರೆ 4,500 ಕೋಟಿ ರು. ಅನುದಾನ ನೀಡಲಾಗಿದೆ.
ಈ ಅನುದಾನ ಮುಖ್ಯವಾಗಿ ಶಿಕ್ಷಣಕ್ಕೆ ನೀಡಿದ್ದು. ಅವರ ಸಾಕ್ಷರತಾ ಪ್ರಮಾಣವೂ ಎಷ್ಟಿದೆ ಎಂಬುದನ್ನು ನೋಡಬೇಕಲ್ಲವೇ? ಹೀಗಿದ್ದರೂ ಇದನ್ನು ಹಲಾಲ್ ಬಜೆಟ್ ಎನ್ನುವ ಬಿಜೆಪಿಯದ್ದು, ಕೊಳಕು ಮನಃಸ್ಥಿತಿ ಎಂದು ಕಿಡಿ ಕಾರಿದರು.