ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಇದೀಗ ಮಾರ್ಷಲ್ ಆರ್ಟ್ ಜಿಯು-ಜಿಟ್ಸು ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಕಳೆದ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ತಾನು ನಡೆಸಿದ ಮಾರ್ಷಲ್ ಆರ್ಟ್‌ನ ವಿಡಿಯೋ ತುಣುಕನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 8 ನಿಮಿಷ 9 ಸೆಕೆಂಡುಗಳ ಕಾಲ ಈ ವೀಡಿಯೋ ಇದೆ.
ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ನಾವು ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಿದ್ದೆವು. ಈ ವೇಳೆ ಪ್ರತಿದಿನ ಸಂಜೆ ನಮ್ಮ ಶಿಬಿರದಲ್ಲಿ ಜಿಯು- ಜಿಟ್ಸು ಸಮರ ಕಲೆಯನ್ನು ತಪ್ಪದೇ ಅಭ್ಯಾಸ ಮಾಡುತ್ತಿದ್ದೆವು. ಇದು ನಮ್ಮನ್ನು ಸದೃಢವಾಗಿ ಇಡಲು ಸಹಕಾರಿ. ಮಾತ್ರವಲ್ಲದೇ ಯಾತ್ರೆಯ ವೇಳೆ ತಂಡದ ಸದಸ್ಯರು ಸಮುದಾಯ ಚಟುವಟಿಕೆಯ ಮೂಲಕ ನಾವು ಉಳಿದುಕೊಂಡಿದ್ದ ಸ್ಥಳಗಳ ಸಮರ ಕಲೆ ಪರಿಣಿತರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಅನುಕೂಲವಾಗಿತ್ತು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ತಾನು ಸಮರ ಕಲೆಗಳಾದ ಐಖಿಡೋದಲ್ಲಿ ʻಬ್ಲಾಕ್ ಬೆಲ್ಟ್ʼ ಮತ್ತು ಜಿಯು-ಜಿಟ್ಸುವಿನಲ್ಲಿ ʻಬ್ಲೂ ಬೆಲ್ಟ್ʼ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ 8 ನಿಮಿಷ 9 ಸೆಕೆಂಡುಗಳ ಈ ವೀಡಿಯೋದಲ್ಲಿ ತಾವು ಕಲಿತ ಸಮರ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಮಕ್ಕಳಿಗೂ ಮಾರ್ಷಲ್ ಆರ್ಟ್ಸ್ ತಂತ್ರಗಾರಿಕೆಗಳ ಬಗ್ಗೆ ಹೇಳಿಕೊಟ್ಟಿದ್ದಾರೆ.
ವೀಡಿಯೋದಲ್ಲಿ ಸಮರ ಕಲೆ ಸಮವಸ್ತ್ರಧಾರಿಯಾಗಿರುವ ರಾಹುಲ್ ಗಾಂಧಿ, ಮಾರ್ಷಲ್ ಆರ್ಟ್ಸ್ ತರಬೇತುದಾರ ಜಿಯು – ಜಿಟ್ಸುವಿನಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಅರುಣ್ ಶರ್ಮಾ ಅವರೊಂದಿಗೆ ಮಕ್ಕಳಿಗೆ ತರಬೇತಿ ಬಗ್ಗೆ ಹೇಳಿಕೊಟ್ಟಿದ್ದಾರೆ. ಅರುಣ್ ಶರ್ಮ ಮತ್ತು ರಾಹುಲ್ ಗಾಂಧಿ ಅವರು ಮಕ್ಕಳಿಗೆ ಸಮರ ಕಲೆಯ ಪಟ್ಟುಗಳನ್ನು ಹೇಳಿಕೊಟ್ಟಿದ್ದಾರೆ. ನಾವೀಗ ಹೇಳಿಕೊಡುತ್ತಿರುವುದು ಐಕಿಡೋ ಮತ್ತು ಜಿಯು ಜಿಟ್ಸು ಸಮರಕಲೆಗಳ ಮಿಶ್ರಣವಾದ ಜಂಟಲ್ ಆರ್ಟ್ ಅನ್ನು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ ಎಂದು ರಾಗಾ ಹೇಳಿದ್ದಾರೆ.
ಧ್ಯಾನ, ಜಿಯು-ಜಿಟ್ಸು, ಐಕಿಡೊ ಮತ್ತು ಅಹಿಂಸಾತ್ಮಕ ಸಂಘರ್ಷ ಪರಿಹಾರ ತಂತ್ರಗಳ ಸಾಮರಸ್ಯದ ಹದವಾದ ಮಿಶ್ರಣವಾದ ‘ಜೆಂಟಲ್ ಆರ್ಟ್ ನ’ ಸೌಂದರ್ಯವನ್ನು ಭಾರತದ ಯುವ ಮನಸ್ಸುಗಳಿಗೆ ಪರಿಚಯಿಸುವುದು ನಮ್ಮ ಗುರಿ. ಹಿಂಸಾಚಾರವನ್ನು ಸೌಮ್ಯತೆಯಾಗಿ ಪರಿವರ್ತಿಸಿ ಯುವ ಮನಸ್ಸುಗಳಿಗೆ ತುಂಬುವ ಗುರಿ ಹೊಂದಿದ್ದೇವೆ ಎಂದು ರಾಗಾ ತಿಳಿಸಿದ್ದಾರೆ.