Saturday, December 9, 2023

Latest Posts

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಕಪ್ಪುಬಾವುಟ ಪ್ರದರ್ಶನ: ಮೊಳಗಿದ ‘ಗೋಬ್ಯಾಕ್ ಸಿದ್ದರಾಮಯ್ಯ’ ಘೋಷಣೆ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಮಳೆಹಾನಿ ಪ್ರದೇಶಗಳ ವೀಕ್ಷಣೆಗೆ ಕೊಡಗಿಗೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟದ ಸ್ವಾಗತ ನೀಡಲಾಯಿತು. ಕೊಡಗಿನ ಗಡಿ ಭಾಗವಾದ ತಿತಿಮತಿಗೆ ಸಿದ್ದರಾಮಯ್ಯ ಅವರ ವಾಹನ ಆಗಮಿಸುತ್ತಿದ್ದಂತೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಫ ನೇತೃತ್ವದಲ್ಲಿ ಜಮಾಯಿಸಿದ್ದ ನೂರಾರು ಯುವ ಮೋರ್ಚಾ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕಾರನ್ನು ಸುತ್ತುವರಿದು, ಅದರಲ್ಲಿ ಕುಳಿತಿದ್ದ ಸಿದ್ಧರಾಮಯ್ಯ ಅವರ ಮಡಿಲಲ್ಲಿ ಸಾವರ್ಕರ್ ಭಾವಚಿತ್ರವನ್ನಿರಿಸಿದರಲ್ಲದೆ,‌ ಕಪ್ಪುಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್ ಸಿದ್ಧರಾಮಯ್ಯ’ ಘೋಷಣೆ ಕೂಗಿದರು.

ರಾಜ್ಯದಲ್ಲಿ ಟಿಪ್ಪ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ ಹಿಂದು ವಿರೋಧಿ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅರ್ಹರಲ್ಲ ಎಂದು ದರ್ಶನ್ ಜೋಯಪ್ಪ ಕಿಡಿಕಾರಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಬಿಗಿ ಬಂದೋಬಸ್ತ್‌ನೊಂದಿಗೆ ಸಿದ್ದರಾಮಯ್ಯ ಅವರ ವಾಹನ ಮುಂದೆ ಸಾಗಲು ಅನುವು ಮಾಡಿಕೊಟ್ಟರು.

ಕಾಂಗ್ರೆಸ್‌ನಿಂದ ಸ್ವಾಗತ:

ವಿಪಕ್ಷ ನಾಯಕ ಹಾಗೂ ಮಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.
ಕೊಡಗಿನ ಗಡಿಭಾಗವಾದ ಆನೆಚೌಕೂರು ಗೇಟ್ ಬಳಿ ಆರತಿ ಬೆಳಗಿ ಹೂಹಾರ ಹಾಕಿ ಕಾಂಗ್ರೆಸ್ ಪ್ರಮುಖರು ಸ್ವಾಗತಿಸಿದರು. ಗೋಣಿಕೊಪ್ಪದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಅಲ್ಲಿಂದ ಅವರು ಮಡಿಕೇರಿಯತ್ತ ಪ್ರಯಾಣ ಬೆಳೆಸಿದರಲ್ಲದೆ, ಮದೆನಾಡು, ಮೊಣ್ಣಂಗೇರಿ, ದೇವರಕೊಲ್ಲಿ ಸೇರಿದಂತೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!