ಮದುವೆ ಮಾಡಿಸುವ ನೆಪದಲ್ಲಿ ಬ್ಲ್ಯಾಕ್‌ಮೇಲ್‌: ಆರೋಪಿಗಳ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಮದುವೆ ಮಾಡಿಸುವುದಾಗಿ ಪುಸಲಾಯಿಸಿ ಮಾಜಿ ಯೋಧರೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಬಂಧಿತರನ್ನು ಬಂಟ್ವಾಳದ ಅಬ್ದುಲ್ ಬಷೀರ್(29) ಹಾಗೂ ಕಡಬದ ಸಾದಿಕ್ (30) ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಫೈಝಲ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಅಮೀರ್ ಎಂಬಾತನಿಗೆ ಶೋಧ ನಡೆಸುತ್ತಿದ್ದಾರೆ.

ಕೃತ್ಯಕ್ಕೆ ಬಳಸಲಾದ ಮೂರು ಮೊಬೈಲ್, 1.05 ಲಕ್ಷ ರೂ.ನಗದು ಮತ್ತು 2.10 ಲಕ್ಷ ರೂ.ಗಳ ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಘಟನೆಯ ವಿವರ: ಕೇರಳದ ಎರ್ನಾಕುಲಂ ಜಿಲ್ಲೆಯ ಮಾಜಿ ಯೋಧ ಜಾನ್ ಮ್ಯಾಥ್ಯು (64) ಎಂಬವರ ಚಾಲಕನಾಗಿದ್ದ ಫೈಝಲ್, ಅವಿವಾಹಿತರಾಗಿದ್ದ ಜಾನ್ ಮ್ಯಾಥ್ಯುರವರಿಗೆ ಮದುವೆಯಾದಲ್ಲಿ ಸಂತೋಷದಿಂದ ಜೀವನ ನಡೆಸಬಹುದೆಂದು ಹುರಿದುಂಬಿಸಿದ್ದಲ್ಲದೆ, ಮದುವೆ ಮಾಡಿಸುವುದಾಗಿ ನಂಬಿಸಿ ತನ್ನ ಪರಿಚಯಸ್ಥರ ಹುಡುಗಿ ಇರುವುದಾಗಿ ತಿಳಿಸಿದ್ದನೆನ್ನಲಾಗಿದೆ.

ಬಳಿಕ ಫೈಝಲ್, ಅಬ್ದುಲ್ ಬಷೀರ್, ಸಾದಿಕ್ ಮತ್ತು ಅಮೀರ್ ಎಂಬವರುಗಳು ಸೇರಿ ಜಾನ್‌ಮ್ಯಾಥ್ಯುರವರಿಗೆ ಮದುವೆ ಮಾಡಿಸಿ ಹಣ ವಸೂಲಿ ಮಾಡುವ ನೆಪದಲ್ಲಿ ನ.26ರಂದು ಮಡಿಕೇರಿ ನಗರದ ಹೋಂಸ್ಟೇಗೆ ಕರೆಸಿ ಮಹಿಳೆಯೊಬ್ಬಳನ್ನು ತೋರಿಸಿ ತಕ್ಷಣವೇ ಮದುವೆ ಮಾಡಿಸಿ ಹೋಂ ಸ್ಟೇಯಲ್ಲಿ ತಂಗಿದ್ದರೆಂದು ಹೇಳಲಾಗಿದೆ.
ಅದೇ ದಿನ ಸಂಜೆ ಫೈಝಲ್, ಅಬ್ದುಲ್ ಬಷೀರ್, ಸಾದೀಕ್ ಮತ್ತು ಅಮೀರ್ ಅವರುಗಳು ಮದುವೆ ಭಾವಚಿತ್ರವನ್ನು ಜಾನ್ ಮ್ಯಾಥ್ಯು ಅವರ ಕುಟುಂಬದವರಿಗೆ ತೋರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ 10 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ಜಾನ್ ಮ್ಯಾಥ್ಯು ಅವರಿಂದ 8 ಲಕ್ಷ ರೂ. ನಗದು ಹಾಗೂ ರೂ. 2.10ಲಕ್ಷ ರೂ.ಗಳ ಚೆಕ್ ಪಡೆದು ಪರಾರಿಯಾಗಿದ್ದರೆಂದು ಆರೋಪಿಸಲಾಗಿದೆ.

ಈ ಕುರಿತು ಜಾನ್ ಮ್ಯಾಥ್ಯು ಅವರು ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಮಡಿಕೇರಿ ಡಿವೈಎಸ್ಪಿ ಎಂ.ಜಗದೀಶ್,ನನಗರ ವೃತ್ತದ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ, ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಐ.ಪಿ.ಮೇದಪ್ಪ, ಮಡಿಕೇರಿ ನಗರ ಠಾಣೆಯ ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!