ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನೀರು ಹರಿಸುತ್ತಿರುವದನ್ನು ಖಂಡಿಸಿ, ಕರವೇ ರಕ್ತ ಚಳವಳಿಗೆ ಮುಂದಾಗಿದೆ. ʻರಕ್ತ ಕೊಟ್ಟೇವು, ನೀರು ಕೊಡೆವುʼ ಎಂಬ ಘೋಷಣೆಗೆ ಮಾತ್ರ ಸೀಮಿತರಾಗದೆ ಕಾರ್ಯಗತಗೊಳಿಸಲು ಕರವೇ ಮುಂದಾಗಿದೆ. ಇದೀಗ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಮ್ಮ ರಕ್ತದಿಂದ ಪ್ರಧಾನಿ ಮೋದಿಗೆ ಪತ್ರ ಬರೆದು ಚಳವಳಿಗೆ ಶ್ರೀಕಾರ ಹಾಡಿದ್ದಾರೆ.
ಕಾವೇರಿ ಎಂದಗೂ ನಮ್ಮದೇ, ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಕೋರಿ ನಾರಾಯಣಗೌಡ ಪತ್ರದಲ್ಲಿ ಬರೆದಿದ್ದಾರೆ. ಸುಮಾರು 75ಅಕ್ಷರಗಳಿರುವ ಪತ್ರವನ್ನು ಪ್ರಧಾನಿ ಕಚೇರಿಗೆ ತಲುಪಿಸಲು ಸಿದ್ಧತೆ ನಡೆಯುತ್ತಿದೆ. ನಾರಾಯಣಗೌಡ ಜೊತೆಗೆ ಕಾರ್ಯಕರ್ತರು ಕೂಡ ರಕ್ತದಲ್ಲಿ ಐದು ಪತ್ರಗಳನ್ನು ಪ್ರಧಾನಿಯವರಿಗೆ ಬರೆದಿದ್ದಾರೆ.
ಒಂದೆರೆಡು ಮಾತ್ರವಲ್ಲದೆ ರಾಜ್ಯ ಎಲ್ಲಾ ಜಿಲ್ಲೆಗಳಿಂದಲೂ ಒಂದು ಲಕ್ಷಕ್ಕೂ ಅಧಿಕ ಪತ್ರಗಳನ್ನು ಬರೆಯಲು ಕರವೇ ನಿರ್ಧರಿಸಿದೆ. ಇನ್ನೂ ಸರ್ವ ಸಂಘಟನೆಗಳ ಒಕ್ಕೂಟ ಕೂಡ ಈ ಚಳವಳಿಗೆ ಸಾಥ್ ನೀಡಿದ್ದು, ರಕ್ತ ನೀಡಲು ಮುಂದಾಗಿದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಸಿಎಂ, ಸುಪ್ರೀಂಕೋರ್ಟ್ ಜಡ್ಜ್‌ಗೂ ರಕ್ತದಲ್ಲಿ ಪತ್ರ ಬರೆಯಲು ಎಲ್ಲಾ ಸಂಘಟನೆಗಳು ಸಜ್ಜಾಗಿವೆ.