ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ವಿರುದ್ಧ ನಡೆಯುತ್ತಿದ್ದ ಜನಾಂದೋಲನ ಇದೀಗ ಹಿಂಸಾಚಾರದ ರೂಪ ಪಡೆದುಕೊಂಡಿದೆ.
ಪ್ರಮುಖ ನಾಗರಿಕ ಸಂಘಟನೆ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (ಜೆಎಎಸಿ) ಮೇಲೆ ನಿಷೇಧ ಹೇರಿದ ಬಳಿಕ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತದ ಕಿಡಿ
ಘಟನೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ಪಿಒಕೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಆರೋಪಿಸಿದೆ. ಪಾಕಿಸ್ತಾನ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಅಂತಾರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಸುಳ್ಳು ಮಾಹಿತಿಗಳ ಆರೋಪ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ತನ್ನ ವೈಫಲ್ಯಗಳನ್ನು ಮರೆಮಾಚಲು ಮತ್ತು ಜಾಗತಿಕ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:
ಜೆಎಎಸಿ ನಾಯಕರಿಂದ ಗಂಭೀರ ಆರೋಪ
ಜೆಎಎಸಿ ನಾಯಕ ಶೌಕತ್ ನವಾಜ್ ಮಿರ್ ಬಿಡುಗಡೆ ಮಾಡಿದ ಸಂದೇಶದಲ್ಲಿ, ರಾವಲಕೋಟ್ ಪ್ರದೇಶದಲ್ಲಿ ಪಾಕಿಸ್ತಾನ ಸರ್ಕಾರ ಜನರ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿದ್ದಾರೆ. ಲಾಕ್‌ಡೌನ್ ಹಾಗೂ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ಅವರು ಘೋಷಿಸಿದ್ದಾರೆ.
ವಿದೇಶಗಳಿಗೂ ತಲುಪಿದ ಪ್ರತಿಭಟನೆ
ಪಿಒಕೆಯ ಹಲವು ಭಾಗಗಳಿಗೆ ವ್ಯಾಪಿಸಿರುವ ಪ್ರತಿಭಟನೆಗಳ ಪರಿಣಾಮ ಬ್ರಿಟನ್‌ನಲ್ಲೂ ಕಾಣಿಸಿಕೊಂಡಿದೆ. ಲಂಡನ್‌ನ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಕಾಶ್ಮೀರಿ ಮೂಲದ ವಲಸಿಗರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಬ್ರಿಟನ್‌ನ 30 ಸಂಸದರು ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಕೈಗೊಳ್ಳುವಂತೆ ತಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



