June 20, 2026
Saturday, June 20, 2026
spot_img

ಅಮೆರಿಕ ಮಧ್ಯಸ್ಥಿಕೆ ನಡುವೆಯೂ ಮುಗಿಯದ ರಕ್ತಪಾತ: ಲೆಬನಾನ್‌ನಲ್ಲಿ ಡ್ರೋನ್ ದಾಳಿಗೆ 5 ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆ ನಡುವೆ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಭೀಕರ ಡ್ರೋನ್ ದಾಳಿ ನಡೆಸಿದೆ. ಈ ತಾಜಾ ದಾಳಿಯಲ್ಲಿ ಕನಿಷ್ಠ 5 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಗಿನ ಜಾವದವರೆಗೆ ನಬತಿಯೇಹ್ ಪ್ರದೇಶದ ವಸತಿ ಸಂಕೀರ್ಣಗಳು ಹಾಗೂ ಸಾರ್ವಜನಿಕರ ಮನೆಗಳ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಸರಣಿ ಬಾಂಬ್ ದಾಳಿ ನಡೆಸಿವೆ ಎಂದು ಲೆಬನಾನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಮೆರಿಕ ಮಧ್ಯಸ್ಥಿಕೆಯ ಒಪ್ಪಂದಕ್ಕೆ ಧಕ್ಕೆ?

ದಕ್ಷಿಣ ಲೆಬನಾನ್‌ನಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಭೀಕರ ಸಮರಕ್ಕೆ ಬ್ರೇಕ್ ಹಾಕಲು ಅಮೆರಿಕ ಮತ್ತು ಕತಾರ್ ದೇಶಗಳು ಮಧ್ಯಸ್ಥಿಕೆ ವಹಿಸಿದ್ದವು. ಇರಾನ್ ಸಹಕಾರದೊಂದಿಗೆ ಶುಕ್ರವಾರವಷ್ಟೇ ಉಭಯ ಬಣಗಳ ನಡುವೆ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಈ ಒಪ್ಪಂದ ಜಾರಿಯಾದ ತಕ್ಷಣವೇ ಇಸ್ರೇಲ್ ದಾಳಿ ಮುಂದುವರೆಸಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ ಮೂಡಿಸಿದೆ.

ನಬತಿಯೇಹ್‌ನಲ್ಲಿ ಮುಂದುವರಿದ ರಕ್ತಪಾತ

ಕದನ ವಿರಾಮಕ್ಕೂ ಒಂದು ದಿನ ಮುನ್ನ, ಅಂದರೆ ಶುಕ್ರವಾರದಂದು ನಬತಿಯೇಹ್ ಜಿಲ್ಲೆಯಾದ್ಯಂತ ನಡೆದಿದ್ದ ಇಸ್ರೇಲ್ ವಾಯುದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದರು. ಅನೇಕರು ತೀವ್ರವಾಗಿ ಗಾಯಗೊಂಡಿದ್ದು, ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನು ಹಲವರು ನಾಪತ್ತೆಯಾಗಿದ್ದಾರೆ. ಈ ರಕ್ತಪಾತದ ಬೆನ್ನಲ್ಲೇ ಒಪ್ಪಂದ ನಡೆದಿದ್ದರೂ, ಇಸ್ರೇಲ್‌ನ ನಿರಂತರ ಆಕ್ರಮಣದಿಂದಾಗಿ ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಭಾರಿ ಹಿನ್ನಡೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !