June 27, 2026
Saturday, June 27, 2026
spot_img

ಚೀನಾ ಹುವಾಂಗ್ಯಾನ್ ದ್ವೀಪದಲ್ಲಿ ‘ಬ್ಲೂ ಹೋಲ್’ ಪತ್ತೆ: ಇಲ್ಲಿನ ಸ್ಥಿತಿಗತಿ ಕಂಡು ಅಧ್ಯಯನಕಾರರಿಗೇ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮುದ್ರದಾಳದಲ್ಲಿ ಸಾವಿರಾರು ವರ್ಷಗಳಿಂದ ಅಡಗಿದ್ದ ಪ್ರಕೃತಿಯ ರಹಸ್ಯವೊಂದನ್ನು ಇದೀಗ ಚೀನಾದ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿರುವ ಹುವಾಂಗ್ಯಾನ್ ದ್ವೀಪ ಸಮೀಪದಲ್ಲಿ ಅಪರೂಪದ ಹವಳದ ಬಂಡೆಗಳ ‘ಬ್ಲೂ ಹೋಲ್’ ಪತ್ತೆ ಮಾಡಲಾಗಿದ್ದು, ಇದನ್ನು ಜೀವವೈವಿಧ್ಯದ ಪ್ರಮುಖ ತಾಣವೆಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ 2,700ಕ್ಕೂ ಹೆಚ್ಚು ಸಮುದ್ರ ಜೀವಿಗಳ ಅಸ್ತಿತ್ವ ಪತ್ತೆಯಾಗಿದೆ ಎಂದು ಚೀನಾದ ಪರಿಸರ ಮತ್ತು ಪರಿಸರಶಾಸ್ತ್ರ ಸಚಿವಾಲಯ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ವಿಜ್ಞಾನಿಗಳ ಪ್ರಕಾರ, ಈ ಬ್ಲೂ ಹೋಲ್ ಮೊದಲ ಬಾರಿಗೆ 2025ರ ಆಗಸ್ಟ್‌ನಲ್ಲಿ ವೈಜ್ಞಾನಿಕ ಸಮೀಕ್ಷೆ ವೇಳೆ ಪತ್ತೆಯಾಗಿತ್ತು. ಪ್ರಾಥಮಿಕ ಅಧ್ಯಯನದಂತೆ ಇದು ಕನಿಷ್ಠ 3,200 ವರ್ಷಗಳ ಹಿಂದೆ ರೂಪುಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲೇ ಅಪರೂಪವಾಗಿ ಕಂಡುಬರುವ ಹವಳದ ಬಂಡೆಗಳ ಬೆಳವಣಿಗೆಯಿಂದ ರೂಪುಗೊಂಡ ಬ್ಲೂ ಹೋಲ್‌ಗಳಲ್ಲಿ ಇದೂ ಒಂದಾಗಿದೆ.

ಇದನ್ನೂ ಓದಿ:

ಸುಮಾರು 1,491.7 ಚದರ ಮೀಟರ್ ವಿಸ್ತೀರ್ಣದ ಪ್ರವೇಶ ಭಾಗ, 56.3 ಮೀಟರ್ ಗರಿಷ್ಠ ವ್ಯಾಸ ಹಾಗೂ 16.6 ಮೀಟರ್ ಆಳ ಹೊಂದಿರುವ ಈ ಬ್ಲೂ ಹೋಲ್ ಕೊಳವೆಯಾಕಾರದ ಆಂತರಿಕ ರಚನೆಯನ್ನು ಹೊಂದಿದೆ. ಇಲ್ಲಿ ಹವಳಗಳು, ದೈತ್ಯ ಕ್ಲಾಮ್‌ಗಳು, ವಿವಿಧ ಮೀನು ಪ್ರಭೇದಗಳು, ಸ್ಪಾಂಜ್‌ಗಳು, ಸಮುದ್ರ ಅನಿಮೋನ್‌ಗಳು ಸೇರಿದಂತೆ ಸಮೃದ್ಧ ಜೀವ ವೈವಿಧ್ಯ ಕಂಡುಬಂದಿದೆ.

ಚೀನಾದಲ್ಲಿ ಮೊದಲ ದರ್ಜೆಯ ಸಂರಕ್ಷಿತ ಪ್ರಭೇದವಾಗಿರುವ ಹಸಿರು ಸಮುದ್ರ ಆಮೆ ಕೂಡ ಇಲ್ಲಿ ವಾಸಿಸುತ್ತಿರುವುದು ದಾಖಲಾಗಿದೆ. ಅಧ್ಯಯನದಲ್ಲಿ 14 ಕುಟುಂಬಗಳಿಗೆ ಸೇರಿದ 165 ಹಾರ್ಡ್ ಕೋರಲ್ ಪ್ರಭೇದಗಳು ಹಾಗೂ 27 ಕುಟುಂಬಗಳಿಗೆ ಸೇರಿದ 184 ಮೀನು ಪ್ರಭೇದಗಳು ಇಲ್ಲಿ ಪತ್ತೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !