ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಮೃತದೇಹ ಸ್ಕಾಟ್ಲೆಂಡ್ ನದಿಯಲ್ಲಿ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿಯನ್ನು 22 ವರ್ಷದ ಕೇರಳ ಮೂಲದ ಸಂತ್ರಾ ಸಾಜು ಎಂದು ಗುರುತಿಸಲಾಗಿದ್ದು, ಎಡಿನ್‌ಬರ್ಗ್ ಬಳಿಯ ನ್ಯೂಬ್ರಿಡ್ಜ್ ಹಳ್ಳಿಯ ನದಿಯೊಂದರದಲ್ಲಿ ಶವ ಪತ್ತೆಯಾಗಿದೆ.
ಸಂತ್ರಾ ಸಾಜು ಸ್ಕಾಟಿಷ್ ರಾಜಧಾನಿ ಎಡಿನ್‌ಬರ್ಗ್‌ದಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಳು. ಡಿ.6 ರಂದು ಸಂಜೆ ಲಿವಿಂಗ್‌ಸ್ಟನ್‌ನ ಆಲ್ಮಂಡ್‌ವೇಲ್‌ನಲ್ಲಿರುವ ಅಸ್ಡಾ ಸೂಪರ್‌ಮಾರ್ಕೆಟ್‌ನಲ್ಲಿ ಸಾಜು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು. ಅದಾದ ಬಳಿಕ ಕಾಣೆಯಾಗಿದ್ದ ಸಾಜು ಕುರಿತು ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ದೂರು ಸ್ವೀಕರಿಸಿದ ಪೊಲೀಸರು ಆಕೆಯ ಸುಳಿವು ಸಿಕ್ಕ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದ್ದರು.
ಆಕೆಯ ಮೈಕಟ್ಟು, ಕೊನೆಯ ಬಾರಿ ಆಕೆ ಧರಿಸಿದ ಬಟ್ಟೆ ಎಲ್ಲದರ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಅವಳ ಫೋಟೋ ಬಿಡುಗಡೆ ಮಾಡಿ ತೀವ್ರ ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಡಿ.27 ರಂದು ಬೆಳಿಗ್ಗೆ 11:55ರ ಸುಮಾರಿಗೆ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನು ಸ್ಕಾಟ್ಲೆಂಡ್‌ನ ಪ್ರಾಸಿಕ್ಯೂಷನ್ ಸೇವೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.