August 25, 2026
Tuesday, August 25, 2026
spot_img

ಗಾಳಿಪಟ ಹಾರಿಸುವಾಗ ರಾಜಕಾಲುವೆಗೆ ಬಿದ್ದಿದ್ದ ಬಾಲಕನ ಶವ 4 ದಿನಗಳ ಬಳಿಕ ಪತ್ತೆ; ಎಂಜಿನಿಯರ್ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ಜಸೋಲಾ ಗ್ರಾಮದಲ್ಲಿ ಗಾಳಿಪಟದ ಹಿಂದೆ ಓಡುವಾಗ ತೆರೆದ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ 15 ವರ್ಷದ ಶಾಲಾ ಬಾಲಕನ ಮೃತದೇಹ ಕೊನೆಗೂ ನಾಲ್ಕು ದಿನಗಳ ಸುದೀರ್ಘ ಶೋಧದ ನಂತರ ಮಂಗಳವಾರ ಪತ್ತೆಯಾಗಿದೆ. ಈ ಭೀಕರ ಘಟನೆ ಇಡೀ ರಾಜಧಾನಿಯನ್ನು ನಡುಗಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ದೆಹಲಿ ಮಹಾನಗರ ಪಾಲಿಕೆ ಜೂನಿಯರ್ ಎಂಜಿನಿಯರ್ ಒಬ್ಬರನ್ನು ಅಮಾನತುಗೊಳಿಸಿದೆ.

ಘಟನೆಯ ವಿವರ

ಮೃತರನ್ನು ಎಂಟನೇ ತರಗತಿ ವಿದ್ಯಾರ್ಥಿ ಮಿಥುನ್ (15) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾದ ಇವರ ಕುಟುಂಬ ದೆಹಲಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮಿಥುನ್ ತನ್ನ ಮನೆಯ ಸಮೀಪ ಗಾಳಿಪಟ ಹಿಡಿಯಲು ಓಡುತ್ತಿದ್ದಾಗ ಮುಚ್ಚಳವಿಲ್ಲದ ತೆರೆದ ರಾಜಕಾಲುವೆಗೆ ಆಕಸ್ಮಿಕವಾಗಿ ಬಿದ್ದಿದ್ದನು.

ಭಾರೀ ಶೋಧ ಕಾರ್ಯಾಚರಣೆ:

ಬಾಲಕ ಬಿದ್ದ ತಕ್ಷಣ ದೆಹಲಿ ಅಗ್ನಿಶಾಮಕ ಸೇವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ನುರಿತ ಮುಳುಗು ತಜ್ಞರ ತಂಡಗಳು ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು. ಆದರೆ, ಸತತ ಪ್ರಯತ್ನದ ಹೊರತಾಗಿಯೂ ನಾಲ್ಕನೇ ದಿನವಾದ ಮಂಗಳವಾರ ಬಾಲಕನ ಶವ ಪತ್ತೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಂದೆಯ ಆಕ್ರಂದನ

ರಕ್ಷಣಾ ಪಡೆಗಳು ಮಗನನ್ನು ಹುಡುಕಲು ವಿಫಲವಾದಾಗ, ಕಣ್ಣೀರಲ್ಲಿ ಮುಳುಗಿದ್ದ ಮಿಥುನ್ ತಂದೆ ತಾವೇ ಸ್ವತಃ ಕೈಯಲ್ಲೊಂದು ಕೋಲು ಹಿಡಿದು ಕೊಳಕು ಕಾಲುವೆಗೆ ಇಳಿದು ಮಗನಿಗಾಗಿ ಹುಡುಕಾಡುತ್ತಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸಾರ್ವಜನಿಕರಲ್ಲಿ ಆಡಳಿತ ವ್ಯವಸ್ಥೆಯ ವಿರುದ್ಧ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಮುಖ್ಯಮಂತ್ರಿಗಳಿಂದ ತೀವ್ರ ಅಸಮಾಧಾನ

ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಸದರಿ ರಾಜಕಾಲುವೆ ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬ ಮಾಹಿತಿಯನ್ನು ಒಂದು ಗಂಟೆಯೊಳಗೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದರು. ಅಲ್ಲದೆ, ನಿರ್ಲಕ್ಷ್ಯ ವಹಿಸಿದ ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಲು ಸೂಚಿಸಿದ್ದರು. ಅದರಂತೆ ಎಂಸಿಡಿಯ ಜೂನಿಯರ್ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖೆಯ ಶಿಸ್ತು ಕ್ರಮಗಳನ್ನು ಜರುಗಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !