ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟ ಏಜಾಜ್ ಖಾನ್ ಇತ್ತೀಚೆಗಷ್ಟೆ ಸುದ್ದಿಯಲ್ಲಿದ್ದರು. ಅದೇನೆಂದರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿ156 ಮತಗಳಷ್ಟೆ ಬಿದ್ದಿದ್ದವು, ಆದರೆ ಅವರ ಇನ್ಸ್ಟಾಗ್ರಾಂನಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳಿದ್ದಾರೆ. ಇದೀಗ ಏಜಾಜ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏಜಾಜ್ ಖಾನ್ ಪತ್ನಿ ಫಲನ್ ಗುಲಿವಾಲ ಅವರನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮುಂಬೈನ ಅವರ ಜೋಗೇಶ್ವರಿ ನಿವಾಸದಲ್ಲಿಯೇ ಫಲನ್ ಗುಲಿವಾಲ ಅವರನ್ನು ಬಂಧಿಸಲಾಗಿದೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಫಲನ್ ಬಂಧನ ಆಗಿದೆ.
ಕೆಲ ದಿನದ ಹಿಂದಷ್ಟೆ ಖಾನ್ರ ಕಚೇರಿಯಲ್ಲಿ ಕೆಲಸ ಮಾಡುವ ಸೂರಜ್ ಗೌಡ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಪ್ರಶ್ನೆ ಮಾಡಿದ್ದರು. ಖಾನ್ ಬಳಿ ಕೆಲಸ ಮಾಡುವ ಸೂರಜ್, ಕೆಲ ದಿನಗಳ ಹಿಂದೆ ಯೂರೋಪ್ ದೇಶದಿಂದ 100 ಗ್ರಾಂ ಮಾದಕ ವಸ್ತುವನ್ನು ಪಾರ್ಸಲ್ ಮೂಲಕ ತರಿಸಿಕೊಂಡಿದ್ದರಂತೆ. ಸೂರಜ್ ಗೌಡ ವಿಚಾರಣೆಯಿಂದ ಈ ಪ್ರಕರಣದಲ್ಲಿ ಏಜಾಜ್ ಖಾನ್ ಪತ್ನಿ ಫಲನ್ ಸಹ ಪಾಲಿರುವುದು ತಿಳಿದು ಬಂದು ಆಕೆಯನ್ನು ಸಹ ಇದೀಗ ಬಂಧಿಸಲಾಗಿದೆ.
ಏಜಾಜ್ ಖಾನ್ರ ಜೋಗೇಶ್ವರಿ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳಿಗೆ 150 ಗ್ರಾಂನಷ್ಟು ಗಾಂಜಾ ಮತ್ತು ಇತರೆ ಕೆಲವು ಮಾದಕ ವಸ್ತುಗಳು ದೊರೆತಿದ್ದವು. ಕಸ್ಟಮ್ಸ್ ಅಧಿಕಾರಿಗಳು ಫಲನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಏಜಾಜ್ ಖಾನ್ ಅನ್ನೂ ಸಹ ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಿದ್ದಾರೆ.
ಏಜಾಜ್ ಖಾನ್ ಬಾಲಿವುಡ್ನ ಜನಪ್ರಿಯ ನಟ. ಕನ್ನಡ, ತೆಲುಗು, ತಮಿಳು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಏಜಾಜ್ ಖಾನ್ ನಟಿಸಿದ್ದಾರೆ.