ನಟ ಸುಶಾಂತ್​ ಸಿಂಗ್​ ಸಾವು ಆತ್ಮಹತ್ಯೆಯಲ್ಲ ಕೊಲೆ: ಶಾಕಿಂಗ್ ​ಹೇಳಿಕೆ ನೀಡಿದ ಆಮೀರ್​ ಖಾನ್​ ಸಹೋದರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಇಂದಿಗೂ ನಿಗೂಢವಾಗಿದ್ದು, ಈ ಬಗ್ಗೆ ಅನೇಕ ವಿಚಾರಗಳು ಆಗಾಗ ಮುಖ್ಯಭೂಮಿಕೆಗೆ ಬಂದು ಹೋಗುತ್ತಿರುತ್ತವೆ.
ಮೊದಲು ಸುಶಾಂತ್​ ಸಿಂಗ್ ​ ಸಾವನ್ನು ಆತ್ಮಹತ್ಯೆ ಎಂದು ಕರೆಯಲಾಗಿದ್ದು, ಆದರೆ ​ ಕುಟುಂಬಸ್ಥರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ದೃಢವಾಗಿ ವಾದಿಸಿದ್ದರು.

ಹೀಗಾಗಿ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಹಲವು ಆಯಾಮಗಳಲ್ಲಿ ಅನುಮಾನ ವ್ಯಕ್ತವಾಗಿತ್ತು. ಆತ್ಮಹತ್ಯೆಯಲ್ಲ, ಇದು ವ್ಯವಸ್ಥಿತವಾದ ಕೊಲೆ ಎನ್ನುವ ಆರೋಪ ಸಹ ಕೇಳಿಬಂದಿತ್ತು.

ಇದೀಗ ಸುಶಾಂತ್​ ಸಿಂಗ್​ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಾಲಿವುಡ್​ ನಟ ಆಮೀರ್​ ಖಾನ್​ ಸಹೋದರ ಸುಶಾಂತ್​ ಸಾವಿನ ಬಗ್ಗೆ ಶಾಕಿಂಗ್ ​ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಸಿಂಗ್​ ಸಾವು ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ನಟ ಫೈಸಲ್​​​ ಖಾನ್ ಬಹಿರಂಗ ಹೇಳಿಕೆ ನೀಡಿದ್ದಾರೆ.

ಫೈಸಲ್​​​ ಖಾನ್ ಇತ್ತೀಚಿಗೆ ಟೈಮ್ಸ್​ ನೌ ನವಭಾರತದ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದು, ಸುಶಾಂತ್​ ಸಿಂಗ್ ರಜಪೂತ್​ ಕೊಲೆಯಾಗಿದ್ದಾನೆ ಎಂದು ನನಗೆ ತಿಳಿದಿದೆ. ಸತ್ಯ ಯಾವಾಗ ಹೊರ ಬರುತ್ತದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ ಸಮಯ ಎಲ್ಲವನ್ನೂ ಹೇಳುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಎಷ್ಟೇ ತನಿಖೆ ನಡೆದರೂ ಸತ್ಯ ಹೊರ ಬರುವುದಿಲ್ಲ. ಆದರೆ ಸುಶಾಂತ್​ ಸಿಂಗ್​ ಸಾವಿನ ಸತ್ಯ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಸುಶಾಂತ್​ ಸಿಂಗ್​ ಸಹೋದರಿ ಮೀತು ಸಿಂಗ್​ ಆಗಾಗ ಸುಶಾಂತ್​ ಫೋಟೋಗಳನ್ನು ಶೇರ್​ ಮಾಡಿ ಆತನೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಹೋದರನ ಸಾವಿನ ಬಳಿಕ ಬಾಲಿವುಡ್​ ಕೆಲ ನಟರ ಬಗ್ಗೆ ಅಸಮಾಧಾಗೊಂಡಿರುವ ಮೀತು ಸಿಂಗ್, ಕಳೆದ ವಾರ ತೆರೆ ಕಂಡ​ ಕರಣ್​ ಜೋಹರ್ ನಿರ್ದೇಶನದ​ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ. ಬಾಲಿವುಡ್​ ಅನ್ನು ನಾಶ ಪಡಿಸಲು ಸುಶಾಂತ್ ಎನ್ನುವ​ ‘ಬ್ರಹ್ಮಾಸ್ತ್ರ’ ಸಾಕು ಎಂದು ಬರೆದು, ನಟ ಸುಶಾಂತ್​ ಸಿಂಗ್​ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಕೂಡ​ ವೈರಲ್ ಆಗಿದೆ.

ಇತ್ತ ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ತನಿಖೆ ನಡೆಸುತ್ತಲೇ ಇದೆ. ಆದರೆ ಈವರೆಗೂ ತನಿಖೆಯ ಅಂತಿಮ ವರದಿ ಹೊರಬಂದಿಲ್ಲ. ಇನ್ನು ಸುಶಾಂತ್​ ಸಿಂಗ್​ ಸಾವಿನ ಪ್ರಕರಣ ಸಂಬಂಧ ಅನೇಕರನ್ನು ವಿಚಾರಣೆಗೊಳಪಡಿಸಲಾಗಿದ್ದು, ನಟನ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಿ ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವೇಳೆ ನಟಿಯ ಇನ್ನಷ್ಟು ಅಕ್ರಮಗಳು ಹೊರ ಬಂದಿದ್ದು, ಡ್ರಗ್ಸ್​ ಖರೀದಿ ಹಾಗೂ ದಾಸ್ತಾನು ಆರೋಪದಲ್ಲಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಬಂಧಿಸಿತ್ತು. ಆ ನಂತರ ರಿಯಾ, ಜಾಮೀನಿನ ಮೇಲೆ ಹೊರಗೆ ಬಂದರು.

ಹಿಂದಿ ಚಿತ್ರರಂಗದ ಹ್ಯಾಂಡ್​ಸಮ್​ ಹಂಕ್​ ಆಗಿದ್ದ ಸುಶಾಂತ್​ ಸಿಂಗ್,​ 2020 ಜೂನ್​ 14ರಂದು ಬಾಂದ್ರಾದ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!