August 30, 2026
Sunday, August 30, 2026
spot_img

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಭೀತಿ: ಟಿಶ್ಯೂ ಪೇಪರ್ ಬರಹಕ್ಕೆ ಬೆಚ್ಚಿಬಿದ್ದ ಸಿಬ್ಬಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಾಂಬ್ ಆತಂಕ ಎದುರಾಗಿತ್ತು. ಇಲ್ಲಿಂದ ದೆಹಲಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ “ಬಾಂಬ್ ಇದೆ” ಎಂಬ ಬರಹವಿದ್ದ ಟಿಶ್ಯೂ ಪೇಪರ್ ಪತ್ತೆಯಾಗಿದ್ದು, ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ರವಾನಿಸಿದರು. ಸುರಕ್ಷತಾ ದೃಷ್ಟಿಯಿಂದ ವಿಮಾನದಲ್ಲಿದ್ದ ಎಲ್ಲಾ 183 ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಿ, ಬಾಂಬ್ ಪತ್ತೆ ದಳ ಹಾಗೂ ಭದ್ರತಾ ಸಿಬ್ಬಂದಿಯಿಂದ ಇಂಚಿಂಚೂ ತಪಾಸಣೆ ನಡೆಸಲಾಯಿತು. ಗಂಟೆಗಳ ಕಾಲ ನಡೆದ ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದು ‘ಹುಸಿ ಬೆದರಿಕೆ’ ಎಂದು ಖಚಿತಪಡಿಸಿ ನಿಟ್ಟುಸಿರು ಬಿಟ್ಟರು.

ಈ ಕಿಡಿಗೇಡಿತನದ ಕೃತ್ಯವನ್ನು ವಿಮಾನದಲ್ಲಿದ್ದ ಪ್ರಯಾಣಿಕರೇ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ವಿಮಾನವು ದೆಹಲಿಗೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದ್ದು, ಟಿಶ್ಯೂ ಪೇಪರ್ ಮೇಲೆ ಸಂದೇಶ ಬರೆದ ಕಿಡಿಗೇಡಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !