ಬೊಮ್ಮಾಯಿ ಈ ರಾಜ್ಯದ ‘ಯೋಗಿ’: ಸಿಎಂ ಅನ್ನು ಹಾಡಿಹೊಗಳಿದ ಯೋಗಿ ಆದಿತ್ಯನಾಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹಾದೇವಪುರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕೇಂದ್ರ ಇವರು ನೂತನವಾಗಿ ನಿರ್ಮಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ “ಕ್ಷೇಮವನ”ವನ್ನು ಇಂದು(ಗುರುವಾರ) ಯುಪಿ ಸಿಎಂ ಯೋಗಿ ಆದಿತ್ಯನಾಥ್ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಯೋಗಿ, ಕರ್ನಾಟಕದಲ್ಲಿ ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಇದರೊಂದಿಗೆ ಆಧ್ಯಾತ್ಮಿಕ ಭಾವನದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಹೊಂದಾಗಿಸುತ್ತದೆ ಎಂದು ಹೇಳಿದರು.

ಭಾರತದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜ ಎಲ್ಲರೂ ಪ್ರಯತ್ನಿಸಬೇಕು. ಇದಕ್ಕಾಗಿ ನಮ್ಮ ಕಾರ್ಯದಲ್ಲಿ ವೃತ್ತಿಪರತೆಯನ್ನು ಮೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಗಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯ ಆಧಾರವಾಯಿತು ಎಂದು ಹೇಳಿದರು.

ಬೊಮ್ಮಾಯಿಯನ್ನು ಹಾಡಿಹೊಗಳಿದ ಯೋಗಿ
ನಾನು ಒಬ್ಬ ಯೋಗಿ, ನಿರ್ಮಲಾನಂದ ಸ್ವಾಮೀಜಿ ಸಹ ಯೋಗಿಯಾಗಿದ್ದಾರೆ. ನಮ್ಮ ಜತೆಗೆ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರು ಸಹ ಒಬ್ಬ ಯೋಗಿಯಂತೆಯೇ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಹಾಡಿಹೊಗಳಿದರು.

ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಬೊಮ್ಮಾಯಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಕರ್ನಾಟಕ ರೂಪುಗೊಳ್ಳಲಿದೆ.ಈ ಕಾರ್ಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!