ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲಾನ್ ಮಾಡಿದ್ದರು : ಸಿ.ಎಂ.ಸಿದ್ದರಾಮಯ್ಯ

ಹೊಸದಿಗಂತ ವರದಿ ಹಾವೇರಿ (ಶಿಗ್ಗಾವಿ) :

ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದರು. ಅದಕ್ಕೇ ಜೊತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.‌

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಮಾತನಾಡಿ, ಮೋದಿ ಮಹಾನ್ ಸುಳ್ಳುಗಾರ ಎಂದು ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡರು ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ ಎಂದರು.

ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ? ನಾನು ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ಬಗ್ಗುತ್ತೇನೆಯೇ ಹೊರತು, ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗದೂ ಇಲ್ಲ. ಜಗ್ಗದೂ ಇಲ್ಲ. ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದರು.

40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ. ಮುಖ್ಯಮಂತ್ರಿಯಾಗಿದ್ದೀನಿ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ ಎಂದರು.

ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಈಗ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ವಿಜಯೇಂದ್ರ ಹೇಗೆ ದುಡ್ಡು ಹೊಡ್ಕಂಡು ಕೂತಿದ್ದ ಎನ್ನುವುದನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ ಕೇಳಿ. ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಒಂದು ಕಡೆ, ಲೂಟಿ ರವಿ ಮತ್ತೊಂದು ಕಡೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಿದೆ. ಈಗ ಜಾತಿ-ಧರ್ಮದ ಹೆಸರಿನಲ್ಲಿ ಬಡವರನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿವಿದರು.

ಬಸವರಾಜ ಬೊಮ್ಮಾಯಿಯನ್ನು ಶಕುನಿ ಎಂದು ಈಗಷ್ಟೆ ಎಲ್ಲಾ ಹೇಳಿದರು. ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ ಅಂತವರು ರಾಜಕಾರಣದಲ್ಲಿ ಇರಬಾರದು. ಆದ್ದರಿಂದ ಪಠಾಣ್ ಅವರನ್ನು ಗೆಲ್ಲಿಸಿ ಕಳುಹಿಸಿ. ಅಜ್ಜಂಪೀರ್ ಖಾದ್ರಿ ಅವರಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!