ದಿಗಂತ ವರದಿ ವಿಜಯಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಮುಡಾ ಕೇಸ್ ಎದುರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟೀಸ್ ಜಾರಿಗೆ ವಿಚಾರಕ್ಕೆ ನಗರದಲ್ಲಿ ವಕ್ಫ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ಬೆಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಕಿಡಿಕಾರಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾವಮೈದ, ಸಿಎಂ ಪತ್ನಿ, ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಇವರೆಲ್ಲರೂ ಅಪರಾಧಿಗಳೆ ಎಂದು ವಾಗ್ದಾಳಿ ನಡೆಸಿದರು.
ಹೀಗಾಗಿ ಇವರೆಲ್ಲರಿಗೂ ಶಿಕ್ಷೆ ಆಗಬೇಕು. ತಮ್ಮ ಮೇಲಿನ ಕೇಸ್ ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ 2013 ರಲ್ಲಿ ಲೋಕಾಯಕ್ತ ಮುಚ್ಚಿ ಹಾಕಿದ್ದರು, ಮುಡಾ ಕೇಸ್ ಮುಚ್ಚಿ ಹಾಕುತ್ತಿದ್ದಾರೆ. ಭೈರತಿ ಸುರೇಶ ಫೈಲ್ ತಂದು ಸುಟ್ಟು ಹಾಕಿದ್ದಾರೆ ಎಂದು ದೂರಿದರು.
ಮುಡಾ ಕೇಸ್ ಸಿಬಿಐಗೆ ನೀಡುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಇಡಿ ತನಿಖೆಯಲ್ಲಿ ಹಲವಾರು ವಿಚಾರಗಳು ಸಿಕ್ಕಿವೆ, ಹೀಗಾಗಿ ಮುಡಾ ಕೇಸ್ ಸಿಬಿಐಗೇ ನೀಡಬೇಕು ಎಂದರು. ವಕ್ಫ್ ವಿವಾದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನೋಟಿಸ್ ನೀಡಿದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ನಮ್ಮ ಸರ್ಕಾರದಲ್ಲಿ ಆಗಲಿ, ಕಾಂಗ್ರೆಸ್ ಸರ್ಕಾರದಲ್ಲಿ ಆಗಲಿ ಯಾರು ವಕ್ಫ್ ನೋಟಿಸ್ ನೀಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ಮಾಡಿದ್ದಾರೆ, ಇದು ಕಾನೂನು ಬಾಹಿರ ಆಗಿದೆ. ವಕ್ಫ್ ಅದಾಲತ್ ಮಾಡಲು ಅಧಿಕಾರ ಇಲ್ಲ. ವಕ್ಫ್ ಅದಾಲತ್ ಮಾಡಿದ್ದು, ಸಾವಿರಾರು ಎಕರೆಗೆ ವಕ್ಫ್ ನೋಟೀಸ್ ನೀಡಿದ್ದಾರೆ. ಮತಾಂದ ಸಚಿವ ಜಮೀರ್ ಅಹ್ಮದ್ ಖಾನ್ ಎಂದು ಕಿಡಿಕಾರಿದ್ದು, ತಕ್ಷಣವೇ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು ಎಂದರು.