Tuesday, May 30, 2023

Latest Posts

ಮೇಕ್‌ ಇನ್‌ ಇಂಡಿಯಾಗೆ ಉತ್ತೇಜನ: 36,400 ಕೋಟಿ ರೂ. ಯೋಜನೆಗಳಿಗೆ ಸಮ್ಮತಿಸಿದ ರಕ್ಷಣಾ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕ್‌ ಇನ್‌ ಇಂಡಿಯಾದ ಮೂಲಕ ದೇಶದಲ್ಲಿ ಉತ್ಪಾದನೆ ಹೆಚ್ಚಿಸಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರವಾಗುವತ್ತ ಭಾರತವು ಮುಂದುವರೆಯುತ್ತಿದ್ದು ಇದೀಗ ಆ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ರಕ್ಷಣಾ ಸಚಿವಾಲಯವು ಬರೋಬ್ಬರಿ 36,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಲವು ಯೋಜನೆಗಳಿಗೆ ಸಮ್ಮತಿ ಸೂಚಿಸಿದೆ. ಈ ಯೋಜನೆಗಳು ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಹೆಚ್ಚಿನ ಶಸ್ತ್ರಾಸ್ತ್ರ ನೀಡುವುದು ಸೇರಿದಂತೆ ಹಲವನ್ನು ಒಳಗೊಂಡಿದೆ.

ಭಾರತೀಯ ಸೇನೆಯ ಎರಡು ರೆಜಿಮೆಂಟ್‌ಗಳಿಗೆ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಉನ್ನತೀಕರಿಸಿದ ಆವೃತ್ತಿಯನ್ನು ನೀಡಲು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಒಪ್ಪಂದಕ್ಕೆ ಸಹಿಹಾಕಿದೆ. ಬಿಡಿಎಲ್‌ನೊಂದಿಗೆ ಉನ್ನತ ಕ್ಷಿಪಣಿ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲಾಗಿದ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದಲ್ಲದೇ 11 OPV ಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವನ್ನು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (GSL) ಮತ್ತು ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (GRSE), ಕೋಲ್ಕತ್ತಾದೊಂದಿಗೆ ಒಟ್ಟು 9,781 ಕೋಟಿ ರೂ. ವೆಚ್ಚದಲ್ಲಿ ಸಹಿ ಮಾಡಲಾಗಿದೆ. ಈ ಹಡಗುಗಳ ಸ್ವಾಧೀನವು ಭಾರತೀಯ ನೌಕಾಪಡೆಯು ತನ್ನ ಯುದ್ಧ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಡಲ್ಗಳ್ಳತನ, ಒಳನುಸುಳುವಿಕೆ ಮುಂತಾದ ವಿವಿಧ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

ಆರು ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳನ್ನು (NGMV) ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನೊಂದಿಗೆ 9,805 ಕೋಟಿ ರೂ ವೆಚ್ಚದಲ್ಲಿ ಸಹಿ ಮಾಡಲಾಗಿದೆ. NGMV ಗಳು ರಹಸ್ಯ, ಹೆಚ್ಚಿನ ವೇಗ ಮತ್ತು ಆಕ್ರಮಣಕಾರಿ ಸಾಮರ್ಥ್ಯವನ್ನು ಒಳಗೊಂಡ ಭಾರೀ ಶಸ್ತ್ರಸಜ್ಜಿತ ಯುದ್ಧ ಹಡಗುಗಳಾಗಿವೆ. ಶತ್ರು ಯುದ್ಧನೌಕೆಗಳು, ವ್ಯಾಪಾರಿಗಳು ಮತ್ತು ಭೂ ಗುರಿಗಳ ವಿರುದ್ಧ ಆಕ್ರಮಣಕಾರಿ ಸಾಮರ್ಥ್ಯವನ್ನು ಒದಗಿಸುವುದು ಹಡಗುಗಳ ಪ್ರಾಥಮಿಕ ಪಾತ್ರವಾಗಿದೆ. ಅಲ್ಲದೆ, ರಕ್ಷಣಾ ಸಚಿವಾಲಯವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನೊಂದಿಗೆ ಭಾರತೀಯ ನೌಕಾಪಡೆಗಾಗಿ 13 ಲಿಂಕ್ಸ್-ಯು 2 ಫೈರ್ ಕಂಟ್ರೋಲ್ ಸಿಸ್ಟಮ್‌ಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಇದಲ್ಲದೇ ಇನ್ನು ಹಲವಾರು ದೇಶೀಯ ರಕ್ಷಣಾ ಉತ್ಪಾದಕರೊಂದಿಗೆ ರಕ್ಷಣಾ ಸಚಿವಾಲಯವು ರಕ್ಷಣಾ ಸಾಮಗ್ರಗಿಗಳ ಪೂರೈಕೆಗೆ  ಒಪ್ಪಂದ ಮಾಡಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!