ಎರಡೂ ತಂಡಗಳು ಸೋಲಲು ಪ್ರಯತ್ನಿಸುತ್ತಿದ್ದವು, ಇದು ಕ್ರಿಕೆಟ್‌ಗೆ ಕೆಟ್ಟ ದಿನ.. ಶೋಯೆಬ್ ಅಖ್ತರ್ ಟೀಕಾಪ್ರಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಪ್ರದರ್ಶನ ಭಾರತದ ಗೆಲುವಿಗೆ ಸಹಕಾರಿಯಾಗಿತ್ತು. ಭಾರೀ ರೋಚಕತೆ ಕೆರಳಿಸಿದ್ದ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದಿತ್ತು. ಕೊನೆಯ ಓವರ್‌ನಲ್ಲಿ ಗೆದ್ದುಬೀಗುವ ಮೂಲಕ ಭಾರತವು ಕಳೆದ ಟಿ 20 ವಿಶ್ವಕಪ್‌ನಲ್ಲಿ ಎದುರಾದ ಸೋಲಿಗೆ ತಿರುಗೇಟು ನೀಡಿದೆ.
ಆದಾಗ್ಯೂ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತ- ಪಾಕ್‌ ತಂಡಗಳ ಪ್ರದರ್ಶನದಿಂದ ಪ್ರಭಾವಿತರಾಗಿಲ್ಲ.
ಈ ಬಗ್ಗೆ ತೀವದ್ರ ಅಸಮಾಧಾನ ಹೊರಹಾಕಿರುವ ಅಖ್ತರ್ ʼಎರಡೂ ತಂಡಗಳು ಪಂದ್ಯವನ್ನು ಕಳೆದುಕೊಳ್ಳಲು‌ ಪ್ರಯತ್ನಿಸುತ್ತಿದ್ದವು. ಇದು “ಕ್ರಿಕೆಟ್‌ಗೆ ಕೆಟ್ಟ ದಿನ” ಎಂದು ಟೀಕಿಸಿದ್ದಾರೆ.
“ನಾನು ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಎದುರಾಳಿಗಳಾದಾಗ ನಾನು ಅದನ್ನು ಆನಂದಿಸಲು ಬಯಸುತ್ತೇನೆ. ಆದರೆ ನಿನ್ನೆಯ ಪಂದ್ಯ ಅತ್ಯಂತ ನಿರಾಶದಾಯಕವಾಗಿತ್ತು. ಏರಡೂ ತಂಡಗಳು ಪಂದ್ಯವನ್ನು ಸೋಲಲು ಪ್ರಯತ್ನಿಸಿದವು. ಅದರಲ್ಲಿ ಭಾರತವು ಬಹುತೇಕ ಯಶಸ್ವಿಯಾಗಿತ್ತು. ಪಂದ್ಯವನ್ನು ಕಳೆದುಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿತು ಆದರೆ ಹಾರ್ದಿಕ್ ಪಾಂಡ್ಯ ಹಾಗಾಗದಂತೆ ತಡೆದರು. ಇನ್ನು ಪಾಕ್‌ ಆರಂಭಿಕ ರಿಜ್ವಾನ್‌ ಆಟವಂತೂ ಏನೇನೂ ಉತ್ತಮವಾಗಿರಲಿಲ್ಲ. ಓರ್ವ ಟಿ 20 ಬ್ಯಾಟ್ಸ್‌ಮನ್‌ 45 ಎಸೆತಗಳಲ್ಲಿ 45 ರನ್ ಗಳಿಸುತ್ತಾನೆಂದರೆ ಏನು ಹೇಳುವುದು? ಪಾಕಿಸ್ತಾನ ಬ್ಯಾಟಿಂಗ್ ಮಾಡುವಾಗ ಮೊದಲ ಆರು ಓವರ್‌ಗಳಲ್ಲೇ 19 ಡಾಟ್ ಬಾಲ್‌ಗಳು ಇದ್ದವು. ನೀವು ತುಂಬಾ ಡಾಟ್ ಬಾಲ್‌ಗಳನ್ನು ಆಡಿದರೆ ನಿಮಗೆ ತೊಂದರೆಯಾಗುತ್ತದೆ” ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
“ಪಂದ್ಯದಲ್ಲಿ ಸಾಕಷ್ಟು ಕೆಟ್ಟ ಆಯ್ಕೆಗಳು ನಡೆದವು. ನಾಯಕರಾದ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಇಬ್ಬರೂ ಕೆಟ್ಟ ಆಯ್ಕೆಗಳನ್ನೇ ಮಾಡಿದರು. ಭಾರತವು ರಿಷಬ್ ಪಂತ್ ಅವರನ್ನು ಕೈಬಿಟ್ಟಿತು ಮತ್ತು ಪಾಕಿಸ್ತಾನವು ಇಫ್ತಿಕರ್ ಅಹ್ಮದ್ ಅವರನ್ನು ನಂ.4 ರಲ್ಲಿ ಆಡಿಸಿತು. ಬಾಬರ್ ಇನ್ನಿಂಗ್ಸ್‌ ಆರಂಭಿಸುವುದು ಸರಿಯಲ್ಲ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ. ಆತ ಮಧ್ಯಮ ಕ್ರಮಾಂಕದಲ್ಲಿ ಬಂದು ಇನ್ನಿಂಗ್ಸ್ ಆಂಕರ್ ಮಾಡಬೇಕು. ಫಖರ್ ಜಮಾನ್ ಮತ್ತು ರಿಜ್ವಾನ್ ಇನ್ನಿಗ್ಸ್‌ ಆರಂಭಿಸಬೇಕಿತ್ತು ಎಂದು ಹೇಳಿದ್ದಾರೆ.
ಮತ್ತಷ್ಟು ಟೀಕಾಪ್ರಹಾರ ಮುಂದವರೆಸಿದ ಅಖ್ತರ್, ” ದುಬೈನಲ್ಲಿ ಎರಡೂ ತಂಡಗಳು ಕೆಟ್ಟ ಕ್ರಿಕೆಟ್ ಆಡಿದವು, ಪಾಕಿಸ್ತಾನವು ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ತವ್ಯಸ್ತಗೊಳಿಸಿತು. ಭಾರತ ಕೂಡ ರವೀಂದ್ರ ಜಡೇಜಾ ಅವರನ್ನು ನಂ.4 ಗೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿತು. ಎರಡೂ ಕಡೆಯಿಂದ ಎಷೊಂದು ಕೆಟ್ಟ ನಿರ್ಧಾರಗಳು ಬಂದವು ಎಂಬುದನ್ನು ನೀವೇ ಗಮನಿಸಿ ಎಂದಿದ್ದಾರೆ.
“ಪಾಕಿಸ್ತಾನ ಹಲವಾರು ಬ್ಲಂಡರ್‌ ಗಳನ್ನು ಮಾಡಿತು. ಆಸಿಫ್ ಅಲಿಗಿಂತ ಮುಂಚೆ ಶಾದಾಬ್ ಖಾನ್ ಅವರನ್ನು ಕಳುಹಿಸಲಾಯಿತು. ಬಾಬರ್ ಅಜಮ್ ಅವರ ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಇದು ನಿಜವಾಗಿಯೂ ಕೆಟ್ಟ ಕ್ರಿಕೆಟ್. ಪಾಕಿಸ್ತಾನವು ಕೊನೆಯ ಓವರ್‌ ಅನ್ನು ಸ್ಪಿನ್ನರ್‌ ಎಸೆಯಬೇಕಾಗಿ ಬರಬಹುದು ಎಂಬ ಲೆಕ್ಕಾಚಾರವನ್ನು ಮಾಡಲಿಲ್ಲ. ಇದು ಕ್ರಿಕೆಟ್‌ನ ಕೆಟ್ಟ ದಿನವಾಗಿತ್ತು. ಎರಡೂ ತಂಡಗಳು ಕಳಪೆಯಾಗಿ ಆಡಿದವು. ನನಗೆ ಪಂದ್ಯವು ಸ್ವಲ್ಪವೂ ಇಷ್ಟವಾಗಲಿಲ್ಲ. ನನ್ನ ಮಾತುಗಳಿಗೆ ಇತರರು ಏನನ್ನುತ್ತಾರೆಂಬ ಭಯವೂ ನನಗಿಲ್ಲʼ. ಎಂದು ಶೋಯಬ್‌ ಅಖ್ತರ್‌ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!