ಹೊಸದಿಗಂತ ವರದಿ ಬೆಂಗಳೂರು:
ಕಾಂಗ್ರೆಸ್ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ, ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವುದು ಸರಿಯಲ್ಲಿ, ಪ್ರಧಾನಿ ಹುದ್ದೆ ಸಾಂವಿಧಾನಿಕ ಹುದ್ದೆ, ಇದನ್ನು ಗೌರವಿಸುವ ಕೆಲಸ ಮಾಡಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ತಮ್ಮ ಪ್ರಧಾನಿ ನರಸಿಂಹರಾವ್, ಡಾ. ಮನಮೋಹನ ಸಿಂಗ್ ಅವರಿಗೆ ಕಾಂಗ್ರೆಸ್ಸಿಗರು ಗೌರವ ಕೊಡಲಿಲ್ಲ. ಎಂದೂ ಅವರು ಇವರಿಬ್ಬರಿಗೆ ಜಯವಾಗಲಿ ಎನ್ನಲಿಲ್ಲ. ಪ್ರಧಾನಿ ಹುದ್ದೆಗೆ ಗೌರವ ಕೊಡಲಿಲ್ಲ. ಅಂಥ ನೀತಿಗೆಟ್ಟ ಜನ ಕಾಂಗ್ರೆಸ್ಸಿನಲ್ಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟನಾ ಸಮಾರಂಭಕ್ಕೆ ಬರುತ್ತಿರುವುದು ಸ್ವಾಗತಾರ್ಹ ಎಂದರು. ಪ್ರಧಾನಿ ದೇವೇಗೌಡರನ್ನು ವಿನಾಕಾರಣ ಆ ಹುದ್ದೆಯಿಂದ ಕೆಳಗಿಳಿಸಿ 6 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ ಎಂದು ಟೀಕಿಸಿದರು.
ದೇವೇಗೌಡರದು ಯಾವುದೇ ಆಪಾದನೆ, ಹಗರಣ ಇಲ್ಲದ ಆಡಳಿತ. ಅವರನ್ನು ಯಾಕೆ ಕೆಳಕ್ಕೆ ಇಳಿಸಿದ್ದೀರಿ ಎಂದು ಕನ್ನಡಿಗರಿಗೆ ತಿಳಿಸಿ ಎಂದು ಆಗ್ರಹಿಸಿದರು. ಇವತ್ತಿಗೂ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಉತ್ತರ ಹೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಗರಣಗಳನ್ನು ಮಾಡಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಇರುವ ವ್ಯಕ್ತಿಗಳು ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಕೀಳುಶಬ್ದದಲ್ಲಿ ಮಾತನಾಡುತ್ತಿದ್ದಾರೆ. ಅವರು ಮೊದಲು ಸಂವಿಧಾನಕ್ಕೆ ಗೌರವ ನೀಡಬೇಕು. ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು. ವಿಶ್ವವೇ ಮೆಚ್ಚಿರುವ ನಾಯಕ ಮೋದಿಜಿ ಅವರನ್ನು ಗೌರವಿಸಿ ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.