Tuesday, May 30, 2023

Latest Posts

ಮನೆಯಂಗಳದಲ್ಲೇ ಇದ್ದ ಕಾರಿಗೂ ಟೋಲ್ ಕಡಿತ: ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಮುಂದುವರಿದ ಸಮಸ್ಯೆ

ಹೊಸದಿಗಂತ ವರದಿ ಪುತ್ತೂರು:

ಪ್ರಯಾಣ ಮಾಡದೇ ಮನೆಯಂಗಳದಲ್ಲೇ ಇದ್ದ ಕಾರಿಗೂ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಬಳಿ ಸಾಗಿರುವುದಾಗಿ ಹೇಳಿ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನಿಂದ ಹಣ ಕಡಿತಗೊಳಿಸಿ ಮೊಬೈಲ್ ಸಂದೇಶ ಬಂದಿರುವ ಬಗ್ಗೆ ವಾಹನ ಮಾಲಕರು ಸಂಬಂಧಪಟ್ಟವರಿಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಮಾಡ್ನೂರು ಗ್ರಾಮದ ನನ್ಯ ನಿವಾಸಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರ ಮಾಲಕತ್ವದ ಸ್ವಿಫ್ಟ್ ಡಿಸೈರ್ ಕಾರು ಮೇ 12ರಂದು ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಬಳಿ ಸಾಗಿರುವುದಾಗಿ ಹೇಳಿ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನಿಂದ ರೂ.65 ಮತ್ತು ರೂ.130 ಒಟ್ಟು ರೂ.195 ಕಡಿತ ಮಾಡಿ ಮೇ.16ರಂದು ರಾತ್ರಿ 9.33ರ ಸುಮಾರಿಗೆ ಮೊಬೈಲ್ ಸಂದೇಶ ಬಂದಿದೆ. ಆದರೆ ಮೇ 16ರಂದು ಅವರ ಕಾರು ಟೋಲ್‌ ಪ್ಲಾಝಾದ ಬಳಿ ಸಂಚರಿಸಿಲ್ಲ.

ಬದಲಾಗಿ ಮೇ 12ರಂದು ಬ್ರಹ್ಮರಕೂಟ್ಲು ಟೋಲ್ ಬಳಿ ಪ್ರಯಾಣ ಮಾಡಿದ್ದು, ಆ ಸಂದರ್ಭದಲ್ಲಿ ಹೋಗುವಾಗ ರೂ. 30 ಬರುವಾಗ ರೂ.15 ಫಾಸ್ಟ್‌ಟ್ಯಾಗ್ ಮೂಲಕ ಟೋಲ್‌ಫೀ ಕಡಿತವಾಗಿದೆ. ಬಳಿಕ ಅದೇ ದಿನಕ್ಕೆ ಮತ್ತೊಮ್ಮೆ 2 ಬಾರಿ ಟೋಲ್‌ಕಡಿತ ಮಾಡಿ ವಾಹನ ಮಾಲೀಕರಿಗೆ ಮೊಬೈಲ್ ಸಂದೇಶ ಕಳುಹಿಸಿದೆ. ಕಾರಿಗೆ ವಿಧಿಸುವ ಟೋಲ್‌ ಫೀಯ ಬದಲಾಗಿ ಘನ ವಾಹನಗಳಿಗೆ ವಿಧಿಸುವ ರೂ.130 ಮತ್ತು ರೂ.65 ಕಡಿತ ಮಾಡಲಾಗಿದೆ. ಈ ಬಗ್ಗೆ ನನ್ಯ ಅಚ್ಚುತ ಮೂಡೆತ್ತಾಯರವರು ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನವರಿಗೆ ತನ್ನ ಅಧಿಕೃತ ಇಮೇಲ್ ಮೂಲಕ ದೂರು ಸಲ್ಲಿಸಿದ್ದು, ಈ ಬಗ್ಗೆ 2 ದಿನದ ಒಳಗಾಗಿ ಪರಿಶೀಲನೆ ಮಾಡಿ ಉತ್ತರ ನೀಡಲಾಗುವುದು ಎಂಬುದಾಗಿ ಮರು ಸಂದೇಶ ಕಳುಹಿಸಲಾಗಿದೆ.

ಈ ಹಿಂದೆಯೂ ಅನೇಕ ಬಾರಿ ಹೀಗೆ ಆಗಿತ್ತು. ಈ ಹಿಂದೆಯೂ ಅನೇಕ ಬಾರಿ ಹೀಗೆ ಆಗಿತ್ತು, ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ವಾಹನ ಪ್ರಯಾಣ ಮಾಡದೇ ಇದ್ದರೂ ಹಣ ಕಡಿತಗೊಳಿಸಿ ಮೊಬೈಲ್‌ಗೆ ಸಂದೇಶ ಬಂದಿತ್ತು. ತಕ್ಷಣವೇ ನಾನು ಇಮೇಲ್ ಮೂಲಕ ದೂರು ಸಲ್ಲಿಸಿದಾಗ ಕಡಿತವಾದ ಹಣವನ್ನು ಮತ್ತೆ ಬ್ಯಾಂಕ್ ಅಕೌಂಟ್‌ಗೆ ಜಮಾ ಮಾಡಿದ್ದರು ಎಂದು ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದ್ದಾರೆ.

ಆದರೂ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಸಮಸ್ಯೆ ಮುಂದುವರಿಯುತ್ತಿದೆ. ನನಗೆ ಮಾತ್ರವಲ್ಲದೇ ಇತರರಿಗೂ ಇದೇ ರೀತಿಯ ಸಮಸ್ಯೆಯಾಗಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದೀಗ ನನಗೆ ಸ್ವತಃ ಅನುಭವವಾಗಿದೆ, ಪ್ರಯಾಣ ಮಾಡುವ ದಿನದಂದು ಸರಿಯಾದ ರೀತಿಯಲ್ಲೇ ಹಣ ಕಡಿತವಾಗುತ್ತದೆ.

ಮತ್ತೊಮ್ಮೆ ಘನವಾಹನಗಳಿಗೆ ವಿಧಿಸುವ ಶುಲ್ಕವನ್ನು ಕಡಿತ ಮಾಡುತ್ತಾರೆ. ಈ ಸಮಸ್ಯೆಯೂ ಟೋಲ್‌ ಸಂಗ್ರಹ ಕೇಂದ್ರದಲ್ಲಿನ ತಾಂತ್ರಿಕ ಸಮಸ್ಯೆಯೋ ಅಥವಾ ಫಾಸ್ಟ್ ಟ್ಯಾಗ್ ವ್ಯಾಲೆಟ್‌ನವರ ಸಮಸ್ಯೆಯೋ, ಅಥವಾ ಟೋಲ್ ಏಜೆನ್ಸಿಯವರ ಸಮಸ್ಯೆಯೋ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಮತ್ತು ಜಿಲ್ಲಾಡಳಿತವೂ ಗಮನಹರಿಸುವಂತೆ ನನ್ಯ ಅಚ್ಚುತ ಮೂಡೆತ್ತಾಯ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!