ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕುಡಿಯುವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೃಹತ್ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ.
ತುಂಗಭದ್ರಾ ನದಿಯಿಂದ ಮಳೆಗಾಲದಲ್ಲಿ ಹರಿದುಬರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುವ ಉದ್ದೇಶದಿಂದ ಶ್ರೀಮಠದ 40 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೃಹತ್ ‘ಇಂಪೌಂಡಿಂಗ್ ರಿಸರ್ವೈಯರ್’ (ಸಂಗ್ರಹಣಾ ಜಲಾಶಯ) ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ:
ಪೀಠಾಧಿಪತಿಗಳಿಂದ ಭೂಮಿ ಪೂಜೆ
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಈ ಮಹತ್ವದ ಯೋಜನೆಯ ಭೂಮಿ ಪೂಜೆ ನೆರವೇರಿಸಿದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಸಿಎಸ್‌ಆರ್ (CSR) ನಿಧಿಯ ಅಡಿಯಲ್ಲಿ ಸುಮಾರು 50 ಕೋಟಿ ರೂಗಳ ಭಾರಿ ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಮುಂಬರುವ 2057ರ ವರೆಗೆ, ಅಂದರೆ ಮುಂದಿನ 30 ವರ್ಷಗಳ ಅವಧಿಗೆ ಮಂತ್ರಾಲಯ ಕ್ಷೇತ್ರದಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ತಲೆದೋರದಂತೆ ಈ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ಹೆಚ್‌ಎಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ. ರವಿ ಹಾಗೂ ಮಠದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



