June 24, 2026
Wednesday, June 24, 2026
spot_img

ಮುಂಡಗೋಡಿನಲ್ಲಿ ಲಂಚದಾಟಕ್ಕೆ ಬ್ರೇಕ್: ಇಬ್ಬರು ಅಧಿಕಾರಿಗಳು ‘ಲೋಕಾ’ ಬಲೆಗೆ

ಹೊಸದಿಗಂತ ವರದಿ ಉತ್ತರ ಕನ್ನಡ:

ಮುಂಡಗೋಡ ತಾಲೂಕಿನ ಎರಡು ಪ್ರತ್ಯೇಕ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ಮಾಡಿ ಲಂಚ ಪಡೆಯುತ್ತಿದ್ದ ವೇಳೆ ಹಣ ಸಮೇತ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಜರುಗಿದೆ.

ತಾಲೂಕಿನ ಹೆಸ್ಕಾಂ ಪ್ರಬಾರ ಎಇಇ ಧರ್ಮರಾಜ ಬೆಡಸಗಾಂವ ಮತ್ತು ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಗಳ ಬಲೆಗೆ ಬಿದ್ದಿದ್ದಾರೆ.

ದೂರುದಾರ ವಿದ್ಯುತ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರು ಐದು ಲಕ್ಷ ರೂ ಕಾಮಗಾರಿ ಬಿಲ್ ಹಾಗೂ ಇನ್ನಿತರ ಕಾಮಗಾರಿ ನೀಡುವಂತೆ ಹೆಸ್ಕಾಂ ಎಇಇ ಧರ್ಮರಾಜ ಬೆಡಸಗಾಂವ ಅವರಿಗೆ ಕೇಳಿದಾಗ, ನಿನ್ನ ಬಿಲ್ ಪಾಸ್ ಮಾಡಲು 75 ರೂ ಸಾವಿರ ಹಣ ನೀಡಿದರೆ ಮಾತ್ರ ಬಿಲ್ ಪಾಸ್ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ನಂತರ ಗುತ್ತಿಗೆದಾರ ಶಿವಯೋಗಿ ಸೋಮವಾರ ಕಾರವಾರದ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಮಂಗಳವಾರ ಗುತ್ತಿಗೆದಾರನಿಂದ ಮುಂಗಡ ಹಣವಾಗಿ ಎಇಇ 65 ಸಾವಿರ ರೂ. ಪಡೆಯುತ್ತಿರುವಾಗ ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ ನೇತೃತ್ವದ ತಂಡ ದಾಳಿ ಮಾಡಿ ಹಣ ಸಮೇತವಾಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:

ಇನ್ನೊಂದು ಪ್ರಕರಣದಲ್ಲಿ ರೈತ ನಾರಾಯಣ ಅರೆಜೊಗಿ ಅವರು ಫಾರ್ಮ ಹೌಸ್ ಮಾಡಲು ಕಂದಾಯ ನಿರೀಕ್ಷರಿಗೆ ಅನುಮತಿಗೆ ಅರ್ಜಿ ಸಲ್ಲಿಸಿದಾಗ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಅವರು 15 ಸಾವಿರ ರೂ ಲಂಚ ಕೇಳಿದ್ದರ ಬಗ್ಗೆ ರೈತ ನಾರಾಯಣ ಸೋಮವಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದ ತಂಡ ಕಂದಾಯ ನಿರೀಕ್ಷಕ 15 ಸಾವಿರ ರೂ ಲಂಚ ಪಡೆಯುತ್ತಿರುವಾಗ ದಾಳಿ ನಡೆಸಿ ಲಂಚದ ಹಣ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !