ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯ ಹಿಂದಿನ ದಿನ ನಡೆಯುವ ಎಲ್ಲ ಶಾಸ್ತ್ರಗಳು ನಡೆದಾಗಿದೆ. ಆದರೆ ಮದುವೆಯ ದಿನವೇ ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಬರಿಯಾಪುರ್‌ದ ಗೌರ್ ಕೋಥಿ ಗ್ರಾಮದ ರಚನಾ ಮೃತರು. ರಚನಾ ತಮ್ಮ ಮದುವೆಯ ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿದೆ.
ರಚನಾ ತನ್ನ ತಮ್ಮನ ಜೊತೆ ಬೈಕ್‌ನಲ್ಲಿ ಮನೆಯ ಹತ್ತಿರವೇ ಇದ್ದ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಟ್ರಕ್ ರಚನಾ ಮೇಲೆ ಹರಿದಿದೆ.
ಕ್ಷಣದಲ್ಲೇ ರಚನಾ ಪ್ರಾಣ ಹೋಗಿದೆ. ತಮ್ಮ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಚನಾ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಮೆಹೆಂದಿಯ ರಂಗು ಮಾಸಿರದೇ, ಮುಖದಲ್ಲಿ ಅರಿಶಿಣದ ಕಳೆಯೂ ಇದ್ದ ರಚನಾ ಮೃತದೇಹ ನೋಡಿ ಪೋಷಕರ ಕರುಳು ಕಿತ್ತುಬಂದಿದೆ. ಅದ್ಧೂರಿಯಾಗಿ ಮದುವೆ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸಿಕೊಡಬೇಕಿದ್ದ ಪೋಷಕರು, ನೆಂಟರು ಅವರನ್ನು ಇದೀಗ ಕಾಣದ ಲೋಕಕ್ಕೆ ಬೀಳ್ಕೊಡಬೇಕಿದೆ.
ಈ ಸುದ್ದಿ ಕೇಳಿ ಗಂಡಿನ ಮನೆ ಕಡೆಯವರು ಹೌಹಾರಿದ್ದಾರೆ. ನಿನ್ನೆಯವರೆಗೂ ಫೋನ್‌ನಲ್ಲಿ ಮಾತನಾಡಿಕೊಂಡಿದ್ದ ಹುಡುಗಿ ಇದೀಗ ಇಲ್ಲ, ಪತ್ನಿಯಾಗಿ ಮನೆಗೆ ಬರಬೇಕಿದ್ದ ಹೆಣ್ಣು ಹೆಣವಾಗಿದ್ದಾಳೆ ಎಂದು ಮದುವೆಯಾಗಬೇಕಿದ್ದ ಹುಡುಗ ಕಣ್ಣೀರಿಟ್ಟಿದ್ದಾನೆ.
ಮದುವೆ ನಿಶ್ಚಯವಾಗಿ ಇನ್ನೇನು ವಾರವಿದೆ ಎನ್ನುವಾಗ ಎಷ್ಟೋ ಮಂದಿ ಮದುವೆಯ ಗಂಡು-ಹೆಣ್ಣನ್ನು ಮನೆಯಿಂದ ಹೊರಕ್ಕೆ ಕಳಿಸೋದಿಲ್ಲ. ಹಸಿ ಮೈ ಎನ್ನುವ ಹೆಸರಿನಲ್ಲಿ ಮನೆಯಲ್ಲಿ ಕೂರಿಸುತ್ತಾರೆ. ಇಂಥ ಅವಘಡಗಳು ನಡೆಯುತ್ತವೆ ಎನ್ನುವ ಭಯಕ್ಕೆ ಹಿಂದಿನವರು ಮಾಡಿದ ರೂಲ್ಸ್ ಇದಾಗಿರಬಹುದು ಎಂದು ಜನ ಹೇಳ್ತಿದ್ದಾರೆ.



