ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ರಂಗದ ಹಿರಿಯ ನಟ ಕಮಲ್ ಹಾಸನ್ ತಮ್ಮ ಬರ್ತ್ಡೇ ದಿನದಂದು ಅದ್ದೂರಿಯಾಗಿ ಪ್ರಕಟಿಸಿದ್ದ ಹೊಸ ಚಿತ್ರಕ್ಕೆ ಆರಂಭದಲ್ಲೇ ದೊಡ್ಡ ವಿಘ್ನ ಎದುರಾಗಿದೆ. ಪೋಸ್ಟರ್ ಮೂಲಕ ಭಾರೀ ಕುತೂಹಲ ಮೂಡಿಸಿದ್ದ ಈ ಆಕ್ಷನ್ ಸಿನೆಮಾದ ‘ಸಂದಿಯಾರ್’ ಎಂಬ ಟೈಟಲ್ ಈಗ ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ
ಚಿತ್ರದ ಶೀರ್ಷಿಕೆಗೆ ತಮಿಳುನಾಡಿನ ಪ್ರಭಾವಿ ಪ್ರಾದೇಶಿಕ ಪಕ್ಷವಾದ ‘ಪುತಿಯ ತಮಿಳಗಂ’ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೆಸರನ್ನು ಹಾಗೇ ಉಳಿಸಿಕೊಂಡರೆ ರಾಜ್ಯದಲ್ಲಿ ಜಾತಿ ಸಂಘರ್ಷಗಳು ಉಂಟಾಗಬಹುದು ಮತ್ತು ಸಾಮಾಜಿಕ ಶಾಂತಿ ಕದಡಬಹುದು ಎಂದು ಪಕ್ಷದ ಮುಖಂಡರು ಆತಂಕ ಹೊರಹಾಕಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಈ ಹೆಸರನ್ನು ಇಡಬಾರದು ಎಂದು ಆಗ್ರಹಿಸಿ ಸೇಲಂ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಟ ಕಮಲ್ ಹಾಸನ್ ಹಾಗೂ ಚಿತ್ರದ ನಿರ್ದೇಶಕ ಅರುಣ್ ಕುಮಾರ್ ವಿರುದ್ಧ ಅಧಿಕೃತ ದೂರು ನೀಡಲಾಗಿದೆ.
ಟೈಟಲ್ ಹಿಂದೆ ರಾಜಕೀಯ ದುರುದ್ದೇಶ?
ಇತ್ತೀಚೆಗಷ್ಟೇ ಡಿಎಂಕೆ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಕಮಲ್ ಹಾಸನ್, ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿಯೇ ಇಂತಹ ವಿವಾದಾತ್ಮಕ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ. ‘ಸಂದಿಯಾರ್’ ಎಂಬುದು ಒಂದು ನಿರ್ದಿಷ್ಟ ಜಾತಿಯನ್ನು ಸೂಚಿಸುವ ಪದವಾಗಿರುವುದರಿಂದ, ಇದು ದಕ್ಷಿಣ ತಮಿಳುನಾಡಿನಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ಸೃಷ್ಟಿಸಬಹುದು ಎಂದು ಪುತಿಯ ತಮಿಳಗಂ ಪಕ್ಷ ಎಚ್ಚರಿಸಿದೆ.
ಇದನ್ನೂ ಓದಿ:
22 ವರ್ಷಗಳ ಹಳೆಯ ಇತಿಹಾಸ ಮರುಕಳಿಸಿತೇ?
ಕಮಲ್ ಹಾಸನ್ ಅವರಿಗೆ ಈ ಹೆಸರಿನ ವಿವಾದ ಹೊಸದೇನಲ್ಲ. ಇಪ್ಪತ್ತೆರಡು ವರ್ಷಗಳ ಹಿಂದೆ, ಅಂದರೆ 2004 ರಲ್ಲೂ ಅವರು ಇದೇ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಾಗ ತಮಿಳುನಾಡಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಆಗ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಕಮಲ್ ಹಾಸನ್ ಅವರೊಂದಿಗೆ ಮಾತುಕತೆ ನಡೆಸಿ, ಸಾಮಾಜಿಕ ಶಾಂತಿಗೆ ಧಕ್ಕೆ ತರುವಂತಹ ಚಿತ್ರಗಳನ್ನು ಮಾಡದಂತೆ ಸೂಚಿಸಿದ್ದರು. ಆ ಕಾರಣಕ್ಕಾಗಿ ಕಮಲ್ ಅವರು ಅಂದು ಚಿತ್ರದ ಹೆಸರನ್ನು ‘ವಿರುಮಾಂಡಿ’ ಎಂದು ಬದಲಾಯಿಸಿದ್ದರು. ಈಗ ಇಷ್ಟು ವರ್ಷಗಳ ನಂತರ ಅದೇ ಹಳೇ ಇತಿಹಾಸ ಮತ್ತೆ ಮರುಕಳಿಸಿದೆ.



