ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ದರ್ಶನ್ ಅಭಿನಯದ ‘ಬೃಂದಾವನ’ ಸಿನಿಮಾದ ಮೂಲಕ ಪರಿಚಯವಾದ ನಟಿ ಕಾರ್ತಿಕಾ ನಾಯರ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೂಲತಃ ಮಲಯಾಳಿ ಕುಟುಂಬದ ಕಾರ್ತಿಕಾ ನಾಯರ್ ತಿರುವನಂತಪುರದಲ್ಲಿ ರೋಹಿತ್ ಮೆನನ್ ಅವರನ್ನು ವಿವಾಹವಾದರು ಹಲವಾರು ನಟಿ-ನಟಿಯರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಕೋರಿದರು.
ಕಾರ್ತಿಕಾ ನಾಯರ್, ಹಿರಿಯ ನಟ ರಾಧಾ ಅವರ ಪುತ್ರಿ. ಅದ್ಧೂರಿ ವಿವಾಹದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಜಾಕಿ ಶ್ರಾಫ್, ರಾಧಿಕಾ ಶರತ್‌ಕುಮಾರ್, ಸುಹಾಸಿನಿ ಮಣಿರತ್ನಂ, ರೇವತಿ, ಮೇನಕಾ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಕಾರ್ತಿಕಾ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ರಾಯಲ್ ಫೇರಿಟೇಲ್ ಬಿಗಿನ್ಸ್. ಬ್ಲೆಸ್ಡ್’ ಎಂದು ಬರೆದುಕೊಂಡಿದ್ದಾರೆ. ಸಮಾರಂಭದ ಮೊದಲು ರೋಹಿತ್ ತನ್ನ ಹಣೆಯ ಮೇಲೆ ಮುತ್ತಿಡುವ ಫೋಟೋವನ್ನು ಕಾರ್ತಿಕಾ ಹಂಚಿಕೊಂಡಿದ್ದಾರೆ.
ಕಾರ್ತಿಕಾ, ಮೊದಲು ನಟಿಸಿದ್ದು ತೆಲುಗು ಸಿನಿಮಾದಲ್ಲಿ. ಆನಂತರ ತಮಿಳಿನ ‘ಕೋ’ ಚಿತ್ರದಲ್ಲಿ ನಟಿಸಿದರು. 17ನೇ ವಯಸ್ಸಿಗೆ ನಾಯಕಿಯಾದ ಕಾರ್ತಿಕಾ, ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಮಿಂಚಿದರು. ಹಿಂದಿಯ ‘ಆರಂಭ್’ ಎಂಬ ಸೀರಿಯಲ್‌ನಲ್ಲೂ ಕಾರ್ತಿಕಾ ಬಣ್ಣ ಹಚ್ಚಿದರು. ಅದು ಅಷ್ಟೇನೂ ಜನಪ್ರಿಯತೆ ತಂದುಕೊಡಲಿಲ್ಲ.
ಹೋಟೆಲ್ ಉದ್ಯಮದಲ್ಲಿಯೂ ಸಕ್ರಿಯರಾಗಿದ್ದ ಕಾರ್ತಿಕಾ, ಅದರಲ್ಲೇ ಮುಂದುವರಿದಿದ್ದಾರೆ. ಕೇರಳದ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಅವರು ನಿರ್ದೇಶಕಿಯಾಗಿದ್ದಾರೆ. ಸಿನಿಮಾರಂಗಕ್ಕೆ ಸಂಪೂರ್ಣವಾಗಿ ವಿದಾಯ ಹೇಳಿ, ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.